ನ್ಯೂಸ್

ಸಾಲ ಒದಗಿಸುವಲ್ಲಿ ಸಹಕಾರಿ ಬ್ಯಾಂಕ್ ನಂಬರ್ ವನ್ * 67ನೆ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಸಚಿವ ಸೋಮಶೇಖರ್ ಮೆಚ್ಚುಗೆ

ಮಂಗಳೂರು: ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಭಾನುವಾರ ನಡೆದ 67 ನೆಯ ಅಖಿಲ ಭಾರತ ಸಹಕಾರ ಸಪ್ತಾಹದ ಕಾರ್ಯಕ್ರಮಕ್ಕೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್‌ಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವರು, ಸಹಕಾರಿ ಸಂಸ್ಥೆಗಳು ಒಗ್ಗಟ್ಟಾಗಿ ಮತ್ತು ಬಲಿಷ್ಠವಾಗಿ ಬೆಳೆಯುತ್ತಿವೆ. ಜನರ ಆವಶ್ಯಕತೆಗಳಿಗೆ ಸಕಾಲದಲ್ಲಿ ಸಾಲ ಸೌಲಭ್ಯ ನೀಡುವಲ್ಲಿ ಸಹಕಾರಿ ಬ್ಯಾಂಕುಗಳು ನಂಬರ್ ವನ್ ಸ್ಥಾನದಲ್ಲಿವೆ ಎಂದರು.

ಸಹಕಾರ ಸಂಸ್ಥೆಗಳನ್ನು ಬಲಪಡಿಸುವ ಸಲುವಾಗಿ ಆರ್ಥಿಕ ಸ್ಪಂದನ ಕಾರ್ಯಮದಡಿ ಮೈಸೂರು, ಬೆಂಗಳೂರು, ಕಲಬುರ್ಗಿ, ಬೆಳಗಾವಿ ವಲಯಗಳಡಿ ಸಾಲ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.

ಆತ್ಮ ನಿರ್ಭರ ಯೋಜನೆಯಡಿ ರಾಜ್ಯಕ್ಕೆ ಮೀಸಲಿಟ್ಟ ಅನುದಾನದಲ್ಲಿ ಸಹಕಾರಿ ಕ್ಷೇತ್ರಕೆ 600 ಕೋಟಿ ಒದಗಿಸಬೇಕು ಎಂದು ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಈ ಅನುದಾನ ಶೀಘ್ರ ದೊರೆಯುತ್ತದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮ್ಾ ಮಾತನಾಡಿ, ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಸಹಕಾರ ಅಧ್ಯಯನ ಪೀಠ ಆರಂಭಿಸಲು ಸರ್ಕಾರದಿಂದ ಅನುಮತಿ ದೊರಕಿದ್ದು, ಈ ವರ್ಷದಿಂದಲೇ ಆರಂಭಗೊಳ್ಳಲಿದೆ ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್, ಮೀನು ಮಾರಾಟ ಮಹಾ ಮಂಡಳದ ಅಧ್ಯಕ್ಷ ಯಶ್ ಪಾಲ್ ಸುವರ್ಣ, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಕೆಎಂಎಫ್ ಅಧ್ಯಕ್ಷ ರವಿರಾಜ ಹೆಗ್ಡೆ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ ಮುಂತಾದವರು ಉಪಸ್ಥಿತರಿದ್ದರು.