ಎನ್.ಆರ್.ಪುರ: ಎಲ್ಲ ಧರ್ಮದವರು ಶಾಂತಿ, ಸೌಹಾರ್ದದಿಂದ ಬಾಳಬೇಕು ಎಂದು ಉಡುಪಿ ಜುಮ್ಮಾ ಮಸೀದಿ ಗುರುಗಳಾದ ಮೌಲಾನ ಮಸಿ ಉಲ್ಲಾ ಖಾನ್ ತಿಳಿಸಿದರು. ಶುಕ್ರವಾರ ಪಟ್ಟಣದ ಜಾಮೀಯಾ ಮಸೀದಿಯಲ್ಲಿ ನೂತನ ಮಹಾದ್ವಾರ ಉದ್ಘಾಟಿಸಿ ಮಾತನಾಡಿ, ಎಲ್ಲ ಜನಾಂಗದವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದು ಇಸ್ಲಾಂ ಧರ್ಮ ಹೇಳುತ್ತದೆ ಎಂದರು.
ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ನಮ್ಮೂರ ಮಸೀದಿ ನೋಡ ಬನ್ನಿ ಎಂದು ಜಾಮೀಯ ಮಸೀದಿಯವರು ಕರೆ ನೀಡಿದ್ದರು. ಇದೇ ಪ್ರಥಮ ಬಾರಿಗೆ ಸಾರ್ವಜನಿಕರಿಗೆ ಮಸೀದಿ ನೋಡಲು ಕರೆ ಬಂದಿದ್ದರಿಂದ ನೂರಾರು ಜನರು ಮಸೀದಿಗೆ ಬಂದು ವೀಕ್ಷಣೆ ಮಾಡಿದರು. ಎಲ್ಲ ರಾಜಕೀಯ ಮುಖಂಡರು, ವಿವಿಧ ಜಾತಿ, ಧರ್ಮದ ಮುಖಂಡರು ಮಸೀದಿ ವೀಕ್ಷಣೆ ಮಾಡಿದರು. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಮಸೀದಿ ವೀಕ್ಷಣೆ ಮಾಡಿದರು. ಎಲ್ಲರಿಗೂ ಸಿಹಿ ನೀಡಲಾಯಿತು.
ಜಾಮೀಯ ಮಸೀದಿ ಕಾರ್ಯದರ್ಶಿ ಸಯ್ಯದ್ ಸಾದಿಕ್ ಬಾಷಾ ಸುದ್ದಿಗಾರರೊಂದಿಗೆ ಮಾತನಾಡಿ, ಮಸೀದಿಗಳ ಬಗ್ಗೆ ಕೆಲವರಿಗೆ ತಪ್ಪುಕಲ್ಪನೆ ಇದೆ. ಅಪಪ್ರಚಾರ ಸಹ ಮಾಡುತ್ತಾರೆ. ಮಸೀದಿಗಳಲ್ಲಿ ನಮಾಜ್, ಧಾರ್ಮಿಕ ಪ್ರವಚನ ಮಾತ್ರ ಮಾಡಲಾಗುತ್ತದೆ. ಆದ್ದರಿಂದ ಹಿಂದು, ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಜನಾಂಗದವರಿಗೂ ಮಸೀದಿ ನೋಡಲು ಆಹ್ವಾನಿಸಿದ್ದೇವೆ ಎಂದರು.
ಜಾಮೀಯ ಮಸೀದಿ ಗುರುಗಳಾದ ಮೌಲಾನ ಅಜ್ನದ್ ಖಾನ್, ಅಲ್ನೂರು ಮಸೀದಿ ಗುರುಗಳಾದ ಮೌಲಾನ ಅಬ್ದುಲ್ಲಾ, ಜಾಮೀಯ ಮಸೀದಿ ಅಧ್ಯಕ್ಷ ನಾಸೀರ್ ಖಾನ್, ಕಾರ್ಯದರ್ಶಿ ಸಾದಿಕ್ ಬಾಷಾ ಇತರರಿದ್ದರು.