ಪಿರಿಯಾಪಟ್ಟಣದ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ಪೊಲೀಸ್ ಇಲಾಖೆಯಿಂದ ಏರ್ಪಡಿಸಿದ್ದ ನಾಗರಿಕರ ಸಭೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ವಿ.ಶ್ರೀಧರ್ ಮಾತನಾಡಿದರು. ಪ್ರಕಾಶ್, ಕೆ.ಯು.ಮುತ್ತಪ್ಪ, ಪ್ರಕಾಶ್ ಇದ್ದರು. 
ನ್ಯೂಸ್

ಸಾರ್ವಜನಿಕರ ನಿರ್ಲಕ್ಷೃದಿಂದ ಕಳ್ಳತನ ಹೆಚ್ಚಳ

ಪಿರಿಯಾಪಟ್ಟಣ: ಸಾರ್ವಜನಿಕರ ನಿರ್ಲಕ್ಷೃದಿಂದ ಕಳವು ಪ್ರಕರಣ ಹೆಚ್ಚುತ್ತಿವೆ ಎಂದು ಇಲ್ಲಿನ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕೆ.ವಿ.ಶ್ರೀಧರ್ ಅಭಿಪ್ರಾಯಪಟ್ಟರು.

ಪಟ್ಟಣದ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ಬುಧವಾರ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ನಾಗರಿಕರ ಸಭೆಯಲ್ಲಿ ಮಾತನಾಡಿದರು. ದುಬಾರಿ ಬೆಲೆಯ ಆಭರಣಗಳನ್ನು ಪ್ರದರ್ಶಿಸುವುದು, ಮನೆಯಿಂದ ಹೊರ ಹೋಗುವಾಗ ಮುನ್ನೆಚ್ಚರಿಕಾ ವಿಧಾನಗಳನ್ನು ಅನುಸರಿಸದಿರುವುದು ಕಳ್ಳತನ ಪ್ರಕರಣಗಳು ನಡೆಯಲು ಪ್ರಮುಖ ಕಾರಣ ಎಂದರು.

ಮನೆಯಿಂದ ಹೊರಗೆ ಹೋಗಲೇಬೇಕಾದ ಅನಿವಾರ್ಯ ಸಂದರ್ಭಗಳಲ್ಲಿ ಬೆಲೆಬಾಳುವ ಆಭರಣ ಮತ್ತು ನಗದನ್ನು ಜತೆಗೆ ಕೊಂಡೊಯ್ಯಬೇಕು ಅಥವಾ ಬ್ಯಾಂಕ್ ಲಾಕರ್‌ನಲ್ಲಿ ಇಡುವುದು ಉತ್ತಮ ಎಂದ ಅವರು, ತಮ್ಮ ಬಡಾವಣೆಗಳಲ್ಲಿ ಅನುಮಾನಾಸ್ಪದ ವಾಗಿ ಓಡಾಡುವವರ ಬಗ್ಗೆ ಸುಳಿವು ದೊರೆತಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ಇತ್ತೀಚಿನ ದಿನಗಳಲ್ಲಿ ತಾಂತ್ರಿಕತೆ ಮುಂದುವರಿದಿದ್ದು, ಸೆನ್ಸಾರ್ ಡೋರ್ ಲಾಕ್, ಸೈರನ್, ಸಿಸಿಟಿವಿ, ಮತ್ತಿತರ ಆಧುನಿಕ ಉಪಕರಣಗಳನ್ನು ಸಾರ್ವಜನಿಕರು ತಮ್ಮ ಮನೆಗಳಿಗೆ ಅಳವಡಿಸಿಕೊಂಡಲ್ಲಿ ಕಳ್ಳತನ ಪ್ರಕರಣಗಳನ್ನು ತಡೆಗಟ್ಟಬಹುದಾಗಿದೆ. ವಾಹನಗಳಿಗೆ ಸೆನ್ಸಾರ್ ಲಾಕಿಂಗ್ ಮತ್ತು ಜಿಪಿಎಸ್ ಟ್ರಾೃಕಿಂಗ್ ಸಿಸ್ಟಮ್ ಅಳವಡಿಸಿಕೊಂಡಲ್ಲಿ ವಾಹನ ಕಳ್ಳತನವಾಗುವುದನ್ನು ತಡೆಗಟ್ಟಬಹುದಾಗಿದೆ ಎಂದು ಮಾಹಿತಿ ನೀಡಿದರು.

ತಾಂತ್ರಿಕ ಪರಿಣಿತ ಪ್ರಕಾಶ್ ಮಾತನಾಡಿ, ಸಿಸಿ ಟಿವಿ ಕ್ಯಾಮೆರಾ ಮತ್ತು ಆಧುನಿಕ ಸುರಕ್ಷತಾ ಉಪಕರಣಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಕೆ.ಯು.ಮುತ್ತಪ್ಪ, ಪುರಸಭೆ ಸದಸ್ಯ ನಿರಂಜನ್, ಮುಖಂಡರಾದ ಕೆ.ಆರ್.ನಿರೂಪಾ, ಮಂಜುಳಾ ನಾಗೇಶ್, ರಮೇಶ್, ಗೋವಿಂದ, ನಾಗರಾಜ್, ಪೊಲೀಸ್ ಇಲಾಖೆ ಸಿಬ್ಬಂದಿ ನಾರಾಯಣಶೆಟ್ಟಿ, ಸತೀಶ್, ನಂಜುಂಡಸ್ವಾಮಿ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.