ನ್ಯೂಸ್

ಸಾರ್ವಜನಿಕ ಹಿತಾಸಕ್ತಿಗೆ ತಲೆಬಾಗಬೇಕು : ಹೈಕೋರ್ಟ್

ಬೆಂಗಳೂರು: ಸಾರ್ವಜನಿಕ ಹಿತಾಸಕ್ತಿಗೆ ವೈಯಕ್ತಿಕ ಹಣಕಾಸಿನ ಹಿತಾಸಕ್ತಿಯು ತಲೆಬಾಗಬೇಕಾಗುತ್ತದೆ ಎಂದಿರುವ ಹೈಕೋರ್ಟ್, ರಾಜ್ಯ ಸರ್ಕಾರವು 11 ಜಿಲ್ಲೆಗಳ ಕೆಲವು ತಾಲೂಕುಗಳಲ್ಲಿ ಸೀಮೆಎಣ್ಣೆ ವಿತರಣೆ ನಿರ್ಬಂಧಿಸಿ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಅಖಿಲ ಕರ್ನಾಟಕ ಸೀಮೆಎಣ್ಣೆ ಸಗಟು ಡೀಲರ್‌ಗಳ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಅರ್ಜಿದಾರರು 2021ರ ಅ.11ರಂದು ಸರ್ಕಾರ ಹೊರಡಿಸಿರುವ ಆದೇಶದ ಬಗ್ಗೆ ಆಕ್ಷೇಪಿಸಿದ್ದಾರೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಸ್ವೇಚ್ಛೆ ಅಥವಾ ತಾರತಮ್ಯ ಕಂಡುಬಂದರೆ ಮಾತ್ರ ಅದನ್ನು ಪರಿಶೀಲನೆಗೆ ಒಳಪಡಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಲಯವು ಆಡಳಿತಗಾರನ ಸ್ಥಾನದಲ್ಲಿ ಕುಳಿತು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಸೀಮೆಎಣ್ಣೆ ವಿತರಿಸಲಾಗದು. ಸಂವಿಧಾನದ 14ನೇ ವಿಧಿ ಉಲ್ಲಂಘನೆಯಾದ ಅಸಾಮಾನ್ಯ ಸಂದರ್ಭ ಹೊರತುಪಡಿಸಿ ನ್ಯಾಯಾಲಯವು ನೀತಿಯ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಯಾರು, ಯಾವ ಉದ್ದೇಶಕ್ಕಾಗಿ, ಅಡುಗೆ ಮಾಡಲು ಅಥವಾ ದೀಪ ಬೆಳಗಿಸಲು ಸೀಮೆಎಣ್ಣೆ ಬಳಸುತ್ತಿದ್ದಾರೆ ಎಂಬುದರ ಮೇಲೆ ಗಮನಹರಿಸಲು ಸಾಧ್ಯವಿಲ್ಲ.

ಈ ಅರ್ಜಿಯನ್ನು ಪುರಸ್ಕರಿಸಿದರೆ ಅದು ನ್ಯಾಯಾಲಯವು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೇಲೆ ನಿಗಾ ಇಟ್ಟಿದ್ದಕ್ಕೆ ಸಮನಾಗುತ್ತದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಸ್ಪಷ್ಟವಾಗಿ ಸ್ವೇಚ್ಛಾಚಾರವಿದೆ ಎಂದು ಕಂಡುಬರದ ಹೊರತು ವಿತರಣಾ ವ್ಯವಸ್ಥೆಯಲ್ಲಿ ಹಂಚಿಕೆಯ ಓಟಕ್ಕೆ ನ್ಯಾಯಾಲಯ ಇಳಿಯುವುದಿಲ್ಲ ಎಂದಿದೆ.

ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯು ಅಡುಗೆ ಮತ್ತು ದೀಪ ಉರಿಸಲು ಪಿಡಿಎಸ್ ಅಡಿ ನಿರ್ದಿಷ್ಟ ಫಲಾನುಭವಿಗಳಿಗೆ ಸೀಮೆಎಣ್ಣೆ ಹಂಚಿಕೆ ಮಾಡಲು ಆದೇಶಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಅಥವಾ ಅನುದ್ದೇಶಿತ ಬಳಕೆಗೆ ಸೀಮೆಎಣ್ಣೆ ಬಳಸುತ್ತಿರುವುದರಿಂದ ಹೀಗೆ ಮಾಡಲಾಗಿದೆ. 2021-22ನೇ ಸಾಲಿನ ಮೂರನೇ ತ್ರೈಮಾಸಿಕಕ್ಕೆ ರಾಜ್ಯ ಸರ್ಕಾರಕ್ಕೆ 7,440 ಕಿಲೋ ಲೀಟರ್ ಸೀಮೆಎಣ್ಣೆ ಹಂಚಿಕೆ ಮಾಡಲಾಗಿತ್ತು ಎಂದೂ ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.