ನ್ಯೂಸ್

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಬಳಕೆ ಮಾಡಿದರೆ ಕೋಟ್ಪಾ ಕಾಯ್ದೆಯಡಿ ಕೇಸು ದಾಖಲಿಸಿ / ಅಪರ ಜಿಲ್ಲಾಧಿಕಾರಿ ಮಂಗಳ

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಟ್ಪಾ ಕಾಯ್ದೆಯಡಿಯಲ್ಲಿ ಸೆಕ್ಷನ್ ೪ ರ ಅನುಸಾರ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಬಳಕೆ ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸಲಾಗುವುದು. ಈವರೆಗೂ ಜಿಲ್ಲೆಯಲ್ಲಿ ೭೩೫ ಪ್ರಕರಣಗಳನ್ನು ದಾಖಲು ಮಾಡಿ ದಂಡವನ್ನು ವಿಧಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಂಗಳಾ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಂಬಾಕು ನಿಯಂತ್ರಣದ ಕುರಿತು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಸರ್ಕಾರದಿಂದ ಹೊಸದಾಗಿ ಆದೇಶಿಸಿರುವ ತಂಬಾಕು ಮಾರಾಟ ಪ್ರತ್ಯೇಕ ಪರವಾನಿಗೆ ನೀತಿಯನ್ನು ಅನುಷ್ಠಾನಗೊಳಿಸಲು ಈಗಾಗಲೇ ಹಿಂದಿನ ಸಭೆಯಲ್ಲಿ ತಿಳಿಸಲಾಗಿದೆ. ರಾಜ್ಯ ಮಟ್ಟದಿಂದ ತರಬೇತಿಯು ಸಹ ನೀಡಿದ್ದು, ಸದರಿ ಸ್ಥಳೀಯ ಸಂಸ್ಥೆಗಳಿAದ ಪರವಾನಿಗೆ ವಿತರಣೆಯಾಗಿರುವವರಿಗೆ ತಂಬಾಕು ಮಾರಾಟ ಪರವಾನಿಗೆ ನೀಡಬೇಕು ಎಂದು ಹೇಳಿದರು.

ಶಾಲಾ ಕಾಲೇಜು ಆವರಣದಿಂದ ನೂರು ಮೀಟರ್ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ. ಜಿಲ್ಲೆಯ ಕೆಲವು ಭಾಗಗಳಲ್ಲಿ ಶಾಲೆಗಳ ಸಮೀಪದಲ್ಲಿ ಮಾರಾಟವನ್ನು ಮಾಡುತ್ತಿರುತ್ತಾರೆ, ಅದನ್ನು ತಡೆಗಟ್ಟಬೇಕು ಎಂದು ಪೊಲೀಸ್ ಇಲಾಖೆಗೆ ಸೂಚಿಸಿದರು.

ಈಗಾಗಲೇ ತಂಬಾಕು ಉತ್ಪನ್ನಗಳನ್ನು ಬಳಸಿ ವ್ಯಸನಕ್ಕೆ ಒಳಗಾಗಿರುವ ೩೩೭೩ ಜನರಿಗೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಶಿಬಿರವನ್ನು ನಡೆಸಿ ಅವರಿಗೆ ಚಿಕಿತ್ಸೆಯನ್ನು ನೀಡುತ್ತಿದ್ದೇವೆ. ಅವರಲ್ಲಿ ೧೬೩ ಜನರು ತಂಬಾಕು ಬಳಕೆ ಮುಕ್ತವಾಗಿದ್ದಾರೆ ಎಂದರು.

ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ತಂಬಾಕು ಮುಕ್ತ ನಾಮಫಲಕಗಳನ್ನು ಅಳವಡಿಸಬೇಕು. ಇದು ಸರ್ಕಾರದ ಆದೇಶವಾಗಿದೆ. ಕಚೇರಿಯ ಆವರಣಗಳಲ್ಲಿ ತಂಬಾಕು ಬಳಕೆ ಮಾಡಬಾರದು ಎಂಬುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯತಿಗಳ ಮುಖಾಂತರ ಒಂದು ಹಳ್ಳಿ ಅಥವಾ ಗ್ರಾಮವನ್ನು ಗುರುತಿಸಿ ಸ್ಥಳೀಯ ಆರೋಗ್ಯ ಕೇಂದ್ರದ ಸಮನ್ವಯದೊಂದಿಗೆ ಗ್ರಾಮದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ತಂಬಾಕು ಮುಕ್ತ ಗ್ರಾಮವನ್ನಾಗಿ ಘೋಷಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶಿಕ್ಷಣ ಇಲಾಖೆ ವತಿಯಿಂದ ಶಾಲಾ-ಕಾಲೇಜುಗಳ ಮುಂಭಾಗ, ಪೊಲೀಸ್ ಇಲಾಖೆಯಿಂದ ಸಾರ್ವಜನಿಕ ಸ್ಥಳಗಳಲ್ಲಿ, ಕೆ.ಎಸ್.ಆರ್.ಟಿ.ಸಿ ವತಿಯಿಂದ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಮಾಡಬಾರದು ಎಂದು ನಾಮಫಲಕಗಳನ್ನು ಅಳವಡಿಸಿ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ತಿಳಿಸಿದರು.

ಸಾರ್ವಜನಿಕ ಆರೋಗ್ಯದ ದೊಡ್ಡ ಮಾರಕಗಳಲ್ಲಿ ತಂಬಾಕು ಸೇವನೆಯು ಒಂದಾಗಿದೆ. ಇದು ವಿಶ್ವದಾದ್ಯಂತ ವರ್ಷಕ್ಕೆ ೮ ದಶಲಕ್ಷಕ್ಕೂ ಹೆಚ್ಚು ಜನರನ್ನು ಕೊಲ್ಲುತ್ತಿದೆ. ಹಾಗೂ ಪ್ರತ್ಯಕ್ಷ ಧೂಮಪಾನ ಮಾಡುವುದರಿಂದ ಸುಮಾರು ದಶಲಕ್ಷಗಳಷ್ಟು ಜನರು ಸಾವಿಗೀಡಾದರೆ, ಧೂಮಪಾನ ಮಾಡದವರು ಪರೋಕ್ಷ ಧೂಮಪಾನಕ್ಕೆ ಬಲಿಯಾಗಿ ೧.೨ ದಶಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ ಎಂದರು.

ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೃಷ್ಣಮೂರ್ತಿ, ಪೋಲಿಸ್ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ ೨೮ ಕೆ.ಎಲ್.ಆರ್. ೦೨ : ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಂಬಾಕು ನಿಯಂತ್ರಣದ ಕುರಿತು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಂಗಳ ಮಾತನಾಡಿದರು. ಡಿಡಿಪಿಐ ಕೃಷ್ಣಮೂರ್ತಿ ಮುಂತಾದವರಿದ್ದರು.