ಶಿವಮೊಗ್ಗ: ವಿದ್ಯಾರ್ಥಿ ಜೀವನದ ಸಾರ್ಥಕತೆ ಕೇವಲ ಪಠ್ಯಪುಸ್ತಕದ ಕಲಿಕೆಯಲಿಲ್ಲ. ಮಕ್ಕಳ ಕಲಿಕೆಯೊಂದಿಗೆ ಒಳಾಂಗಣ ಮತ್ತು ಹೊರಾಂಗಣ ಆಟ-ಪಾಠಗಳಿಗೂ ಪ್ರಾಮುಖ್ಯತೆ ನೀಡಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ ಹೇಳಿದರು.
ನಗರದ ಬಿ.ಎಚ್.ರಸ್ತೆಯ ಜಿಲ್ಲಾ ಸ್ಕೌಟ್ ಭವನದಲ್ಲಿ ಕ್ಲಬ್ ಮಾಸ್ಟರ್, ಪ್ಲಾಕ್ ಲೀಡರ್, ಸ್ಕೌಟ್ ಮಾಸ್ಟರ್, ಗೈಡ್ ಕ್ಯಾಪ್ಟನ್‌ಗಳ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಯುವಜನತೆಗೆ ಕೌಶಲ್ಯ ಆಧಾರಿತ ಕಾರ್ಯಕ್ರಮ, ಚಟುವಟಿಕೆ, ತರಬೇತಿಗಳನ್ನು ಆಯೋಜಿಸುವ ಮೂಲಕ ಮಾನವೀಯ ಭಾವ, ನೈತಿಕ ಮೌಲ್ಯ, ಸುಜಿಸುವ ಕೆಲಸವನ್ನು ಸ್ಕೌಟ್ ಗೈಡ್ ಸಂಸ್ಥೆ ಮಾಡುತ್ತಿದೆ ಎಂದರು.
ಸಮಾಜದಲ್ಲಿ ಎಲ್ಲರೂ ಸಮಾನರು. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಕಲೆ ಅಡಗಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವುದು ಶಿಕ್ಷಕರ ಕರ್ತವ್ಯವಾಗಿದೆ. ಮಕ್ಕಳಲ್ಲಿ ಸ್ನೇಹ, ಸಹೋದರತ್ವ, ಸೇವಾ ಮನೋಭಾವನೆ ಮತ್ತು ಸಾಧಿಸುವ ಛಲ ಬೆಳೆಸಬೇಕು. ಆದ್ದರಿಂದ ಇಂತಹ ಶಿಕ್ಷಣ ನೀಡಿದ 7 ದಿನ ತರಬೇತಿಯ ಸದುಪಯೋಗ ಪಡೆದುಕೊಂಡು ನಿಮ್ಮ ಶಾಲೆಗಳಲ್ಲಿ ದಳವನ್ನು ಪ್ರಾರಂಭಿಸಬೇಕು. ಆ ಮೂಲಕ ಹಂತ ಹಂತವಾಗಿ ತರಬೇತಿ ನೀಡಿ ರಾಜ್ಯ ಪುರಸ್ಕಾರದವರೆಗೆ ಮಕ್ಕಳನ್ನು ಸಜ್ಜುಗೊಳಿಸಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮುಖ್ಯ ಆಯುಕ್ತ ಎಚ್.ಡಿ.ರಮೇಶಶಾಸ್ತ್ರಿ ಮಾತನಾಡಿದರು. ಜಿಲ್ಲಾ ಆಯುಕ್ತ (ಸ್ಕೌಟ್)ಕೆ.ಪಿ.ಬಿಂದುಕುಮಾರ್, ಜಿಲ್ಲಾ ಆಯುಕ್ತೆ(ಗೈಡ್) ಶಕುಂತಲಾ ಚಂದ್ರಶೇಖರ್, ಜಿಲ್ಲಾ ಕಾರ್ಯದರ್ಶಿ ಎಚ್.ಪರಮೇಶ್ವರ್, ಎಎಸ್‌ಓಸಿ(ಗೈಡ್) ಭಾರತಿ ಡಯಾಸ, ಜಿಲ್ಲಾ ತರಬೇತಿ ಆಯುಕ್ತ (ಸ್ಕೌಟ್)ಗಣಪತಿ, ಜಿಲ್ಲಾ ತರಬೇತಿ ಆಯುಕ್ತೆ(ಗೈಡ್)ಸಿ.ಎಸ್.ಕಾತ್ಯಾಯಿನಿ, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಡಿ.ಎನ್.ನೂರ್ ಅಹಮದ್, ವೆಂಕಟೇಶ್, ಹರೀಶ್, ರಾಮಚಂದ್ರಪ್ಪ, ನಾಲ್ಕು ತರಬೇತಿ ಶಿಬಿರದ ನಾಯಕರು, ಸಹನಾಯಕರು ಹಾಜರಿದ್ದರು.