* ಆರ್.ಮುನಿರಾಜು ವೇಮಗಲ್
ವೇಮಗಲ್ ಪಟ್ಟಣದಿಂದ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಗೆ ಸಂಚರಿಸುತ್ತಿದ್ದ ಬಸ್ಗಳನ್ನು ನಿಲ್ಲಿಸಲಾಗಿದ್ದು, ಅದಕ್ಕೆ ಮರು ಚಾಲನೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವೇಮಗಲ್ ಗ್ರಾಮ ಪಂಚಾಯಿತಿಯನ್ನು ಕುರಗಲ್&ವೇಮಗಲ್ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜಗೇರಿಸಲಾಗಿದೆ. ಈ ಭಾಗದಲ್ಲಿ ಪ್ರತಿಷ್ಠಿತ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಇದಕ್ಕೆ ತಕ್ಕಂತೆ ಜನ ಸಂಖ್ಯೆಯೂ ಏರಿಕೆಯಾಗುತ್ತಿದೆ.
ಈ ಭಾಗದಿಂದ ಬೆಂಗಳೂರು, ಹೋಸಕೋಟೆ, ದೇವನಹಳ್ಳಿ, ಚಿಂತಾಮಣಿ ಭಾಗಕ್ಕೆ ಕೆಲಸಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಜತೆಗೆ ಶಾಲಾ&ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಸಹ ಹೆಚ್ಚಾಗಿದ್ದಾರೆ. ಈ ಹಿಂದೆ ವೇಮಗಲ್ನಿಂದ ಬೆಂಗಳೂರಿಗೆ ಹಾಗೂ ವೇಮಗಲ್ನಿಂದ ಮದ್ದೇರಿ ಮಾರ್ಗವಾಗಿ ಚಿಂತಾಮಣಿಗೆ ನೇರ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೋವಿಡ್ ನಂತರ ಬಸ್ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಸ್ವಂತ ವಾಹನಗಳಲ್ಲಿಯೇ ತೆರಳಬೇಕಾಗಿತ್ತು. ವಾಹನಗಳ ವ್ಯವಸ್ಥೆ ಇಲ್ಲದೆ ಇರುವವರು ಸಿಕ್ಕಿರುವ ಕೆಲಸ ಬಿಟ್ಟು ಸ್ಥಳಿಯವಾಗಿ ಕೆಲಸ ಹುಡುಕಿಕೊಳ್ಳುವ ಅನಿವಾರ್ಯ ಎದುರಾಗಿದೆ.
ಪ್ರತಿದಿನ ವೇಮಗಲ್ ಪಟ್ಟಣದಿಂದ ನೂರಾರು ಮಹಿಳೆಯರು, ಯುವಕರು, ರೈತರು, ವಿದ್ಯಾರ್ಥಿಗಳು, ಕಾರ್ಮಿಕರು ಉದ್ಯೋಗಕ್ಕಾಗಿ, ಆಸ್ಪತ್ರೆ, ಸರ್ಕಾರಿ ಕಚೇರಿ, ತೀರ್ಥಯಾತ್ರೆ ಹಾಗೂ ಖಾಸಗಿ ಕಾರ್ಯಕ್ರಮಗಳಿಗೆ ಬೆಂಗಳೂರು, ದೇವನಹಳ್ಳಿ, ಚಿಂತಾಮಣಿ ಸೇರಿ ಬೇರೆ ಬೇರೆ ಜಿಲ್ಲೆಗಳಿಗೆ ತೆರಳುವವರು ಇದ್ದಾರೆ.
ಪ್ರಸ್ತುತ ಬೆಂಗಳೂರಿಗೆ ನೇರ ಬಸ್ ಸಂಪರ್ಕವಿಲ್ಲದ ಕಾರಣ ವೇಮಗಲ್ ಹಾಗೂ ಸುತ್ತಮುತ್ತಲಿನ ಜನರು ನರಸಾಪುರ ಮತ್ತು ಎಚ್.ಕ್ರಾಸ್ಗೆ ಹೋಗಿ ಮತ್ತೆ ಅಲ್ಲಿ ಬಸ್ ಬದಲಾಯಿ ಬೆಂಗಳೂರಿಗೆ ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದಾಗಿ ನಿಗದಿತ ಸಮಯಕ್ಕೆ ಅಂದುಕೊಂಡ ಸ್ಥಳಕ್ಕೆ ತೆರಳಲು ಹೆಚ್ಚು ಸಮಯಬೇಕಾಗಿದೆ.
ವೇಮಗಲ್ನಲ್ಲಿ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪಿಯುಸಿ, ಪದವಿ ಹಾಗೂ ವಿವಿಧ ಸರ್ಕಾರಿ ಕಚೇರಿಗಳು ಇವೆ. ಹಳ್ಳಿಗಳಿಂದ ಪಟ್ಟಣಕ್ಕೆ ಬಂದಿರುವವರು ಕೆಲಸ ಮುಗಿಸಿಕೊಂಡು ಮನೆಗಳಿಗೆ ವಾಪಸ್ ತೆರಳಲೂ ಸಹ ಸಮರ್ಪಕ ಸಾರಿಗೆ ವ್ಯವಸ್ಥೆಯಿಲ್ಲದೆ ಇರುವುದರಿಂದ ಖಾಸಗಿ ಆಟೋಗಳನ್ನು ಅವಲಂಭಿಸಬೇಕಾಗಿದೆ.
ನಿತ್ಯ ಬೆಳಗ್ಗೆ 6 ಗಂಟೆಯಿಂದ 8ಕ್ಕೆ ವೇಮಗಲ್ ಗ್ರಾಮದಿಂದ ಬೆಂಗಳೂರಿಗೆ ನೇರ ಬಸ್ ಕಲ್ಪಿಸಲು ಮತ್ತು ಸದರಿ ಬಸ್ ಸಂಜೆ 5.30 ಬೆಂಗಳೂರಿನಿಂದ ವೇಮಗಲ್ಗೆ ಸಂಚರಿಸುವ ಬಸ್ಗಳ ವ್ಯವಸ್ಥೆ ಮಾಡಬೇಕು ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ.
* ಸಂಚಾರದಿಂದ ಅನುಕೂಲ
ವೇಮಗಲ್&ಕುರಗಲ್ ಪಟ್ಟಣ ಪಂಚಾಯಿತಿ ತಾಲೂಕು ಪಂಚಾಯಿಯಾಗಲು ದಾಪುಗಾಲು ಇಡುತ್ತಿದ್ದು, ಜನರ ಬೇಡಿಕೆಗೆ ತಕ್ಕಂತೆ ಬಸ್ ಸಂಚಾರದ ವ್ಯವಸ್ಥೆ ಕಲ್ಪಿಸಿದರೆ ಅನುಕೂಲವಾಗಲಿದೆ. ರಾಜ್ಯ ಸರ್ಕಾರವು ಶಕ್ತಿ ಯೋಜನೆ ಜಾರಿಗೆ ತಂದಾಗ ಹೆಚ್ಚುವರಿ ಬಸ್ಗಳು ವೇಮಗಲ್ಗೆ ಸಂಚರಿಸುತ್ತವೆ ಎಂಬ ನಿರೀೆಯಿತ್ತು. ಆದರೂ ಸಹ ಕನಸು ಈಡೇರಲಿಲ್ಲ ಎಂದು ಸ್ಥಳಿಯರು ಅಸಮಾಧಾನ ಹೊರ ಹಾಕಿದ್ದಾರೆ.
* ಎಂಎಲ್ಎ, ಎಂಎಲ್ಸಿಗೂ ಮನವಿ
ವೇಮಗಲ್ ಪಟ್ಟಣದಿಂದ ಬೆಂಗಳೂರು, ದೇವನಹಳ್ಳಿ, ಎಚ್.ಕ್ರಾಸ್, ಚಿಕ್ಕಬಳ್ಳಾಪುರ, ಚಿಂತಾಮಣಿ, ಕೈವಾರ ಸೇರಿ ಹಲವು ಪ್ರಮುಖ ಊರುಗಳಿಗೆ ಸಂಪರ್ಕ ಕಲ್ಪಿಸುವ ಪ್ರದೇಶವಾಗಿದೆ. ಜತೆಗೆ ಸೀತಿ, ಕೈವಾರ ಪುಣ್ಯ ಕ್ಷೇತ್ರಗಳಿಗೆ ತೆರಳಬೇಕಾದರೆ ವೇಮಗಲ್ ಮೂಲಕವೇ ಹೋಗಬೇಕು. ಆದ ಕಾರಣ ವೇಮಗಲ್ನಿಂದ ಪ್ರತ್ಯೇಕ ಬಸ್ ಸಂಚಾರದ ವ್ಯವಸ್ಥೆ ಮಾಡಬೇಕು ಎಂದು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಬಂದಿದ್ದ ಶಾಸಕ ಕೊತ್ತೂರು ಜಿ.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಅವರಿಗೂ ಮನವಿ ಸಲ್ಲಿಸಿದರೂ ಬೇಡಿಕೆ ಈಡೇರಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಟ್...
ಮಹಿಳೆಯರು ಚಿಕ್ಕ ಮಕ್ಕಳನ್ನು ಎತ್ತಿಕೊಂಡು ವೇಮಗಲ್ನಿಂದ ಬೆಂಗಳೂರಿಗೆ ಬಸ್ಗಳನ್ನು ಬದಲಾಯಿಸಿಕೊಂಡು ಹೋಗುವುದು ಕಷ್ಟ. ಎಚ್.ಕ್ರಾಸ್ ಮಾರ್ಗದಲ್ಲಿ ಪ್ರಯಾಣಿಕರು ಹೆಚ್ಚು ಇರುವುದರಿಂದ ಬಸ್ಗಳಲ್ಲಿ ಒತ್ತಡ ಜಾಸ್ತಿ ಇರುತ್ತದೆ. ವೇಮಗಲ್ನಿಂದಲೇ ನೇರ ಬಸ್ ವ್ಯವಸ್ಥೆ ಮಾಡಬೇಕು.
> ಪುರಹಳ್ಳಿ ಜಿ.ಯಲ್ಲಪ್ಪ, ಕರ್ನಾಟಕ ದಲಿತ ನಾಗರಿಕ ಸುಮಿತಿ ಅಧ್ಯಕ್ಷ, ವೇಮಗಲ್
ಕೋಟ್...
ವೇಮಗಲ್ ಭಾಗದಲ್ಲಿ ಕೈಗಾರಿಕಾ ಪ್ರದೇಶಗಳು ಸ್ಥಾಪನೆಯಾಗಿವೆ. ಜನಸಂಖ್ಯೆಯು ಹೆಚ್ಚಾಗುತ್ತಿರುವುದರಿಂದ ನಿತ್ಯ ಬೆಂಗಳೂರಿಗೆ ನಾನಾ ಕೆಲಸ ಕಾರ್ಯಗಳಿಗೆ ಹೋಗುವವರ ಸಂಖ್ಯೆ ಹೆಚ್ಚಿದ್ದು, ಬೆಂಗಳೂರಿಗೆ ನೇರ ಬಸ್ ಅತ್ಯವಶ್ಯಕವಾಗಿದೆ. ಈ ಕುರಿತು ಮಾಜಿ ಸಭಾಪತಿ ವಿ. ಆರ್.ಸದರ್ಶನ್ ಅವರ ಮೂಲಕ ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಶಾಸಕ ಕೊತ್ತೂರು ಜಿ.ಮಂಜುನಾಥ್ ಗಮನಕ್ಕೂ ತರಲಾಗಿದೆ.
> ಸಿ.ಅರುಣ್ ಕುಮಾರ್, ಉಪ ಮಂಡಲ ಅಭಿಯಂತರ, ಬಿ.ಎಸ್.ಎನ್.ಎಲ್, ವೇಮಗಲ್
ಕೋಟ್...
ಶಕ್ತಿ ಯೋಜನೆ ಜಾರಿ ಅದಾಗಿನಿಂದ ಬಸ್ ಮಾರ್ಗಗಳಿಗೆ ಹೆಚ್ಚು ಬೇಡಿಕೆಯಾಗಿದ್ದು, ಅದರ ಪ್ರಕಾರ ಬಸ್ಗಳ ವ್ಯವಸ್ಥೆ ಮಾಡಲಾಗುತ್ತಿದೆ. ವೇಮಗಲ್ ಸ್ಥಳಿಯರ ಮನವಿ ಪರಿಶೀಲಿಸಿ ಕ್ರಮವಹಿಸಲಾಗುವುದು.
> ಎನ್.ಶ್ರೀನಾಥ್, ವಿಭಾಗೀಯ ನಿಯಂತ್ರಣಾಧಿಕಾರಿ, ಕೋಲಾರ