ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವುದನ್ನು ಖಂಡಿಸಿ ಗಂಧದಗುಡಿ ಫೌಂಡೇಷನ್ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ನಗರದ ಗಾಂಧಿವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ದಿನೇ ದಿನೆ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಂತಹ ಜನನಿಬಿಡ ಪ್ರದೇಶದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿರುವುದು ಖಂಡನೀಯ. ಇತ್ತೀಚೆಗೆ ದರೋಡೆ, ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚುತ್ತಿದ್ದರೂ ಪೊಲೀಸರು ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.
ರಾತ್ರಿ ವೇಳೆ ಒಂದು ಹೆಣ್ಣು ಒಬ್ಬಂಟಿಯಾಗಿ ಓಡಾಡಲು ಕಷ್ಟವಾಗಿದೆ. ಗಾಂಧೀಜಿ ಕಂಡ ರಾಮರಾಜ್ಯದ ಕನಸು ಬೆಂಗಳೂರಿನಲ್ಲಿ ಇಲ್ಲ. ಅಂತೆಯೇ ಬೀದರ್, ಮಂಗಳೂರು, ಮೈಸೂರಿನಲ್ಲಿ ದರೋಡೆ ನಡೆದಿದ್ದು, ವಿಜಯಪುರದಲ್ಲಿ ಕೂಲಿ ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ. ಇದೆಲ್ಲವೂ ಕಾನೂನು ಸುವ್ಯವಸ್ಥೆ ಹಾಳಾಗಿರುವುದರ ಸಂಕೇತ. ಕೂಡಲೇ ಅಪರಾಧಿಗಳನ್ನು ಬಂಧಿಸಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಫೌಂಡೇಷನ್ ಅಧ್ಯಕ್ಷ ಆರ್ಯನ್ ಗಂಧದಗುಡಿ, ಉಪಾಧ್ಯಕ್ಷ ಮನೋಹರ್ ಗೌಡ, ನಗರ ಉಪಾಧ್ಯಕ್ಷ ಗೌತಮ್, ಮೇಘನ್ ರಾಜ್, ಅಭಿನಂದನ್ ಅರಸ್, ಅರ್ಜುನ್ ಪಾರ್ಥ, ಲೋಹಿತ್ ಶರ್ಮಾ, ಯಶೋಧಾ, ಸವಿತಾ, ಹೇಮಂತ್ ರಾವ್, ಚೇತನ್ ಶೆಟ್ಟಿ ಇತರರಿದ್ದರು.