ನಂಜನಗೂಡು: ಶಾಸಕ ಬಿ.ಹರ್ಷವರ್ಧನ್ ಅವರ 46ನೇ ವರ್ಷದ ಹುಟ್ಟುಹಬ್ಬವನ್ನು ಬಿಜೆಪಿ ಪಕ್ಷದ ಮುಖಂಡರು ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.
ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳುಗೆ ಹಣ್ಣು ವಿತರಿಸಿದರು. ತಾಲೂಕಿನ ಹರತಲೆ ಹಾಗೂ ವೀರೇದೇವನಪುರ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್‌ಗಳನ್ನು ವಿತರಿಸಲಾಯಿತು. ಸಿ.ಚಿಕ್ಕರಂಗನಾಯ್ಕ ಅಭಿಮಾನಿ ಬಳಗದ ವತಿಯಿಂದ ಅಂಗವಿಕಲರಿಗೆ ಬೆಡ್‌ಶೀಟ್ ನೀಡಲಾಯಿತು.
ಬಿಜೆಪಿ ಮಂಡಲ ಅಧ್ಯಕ್ಷ ಹೊರಳವಾಡಿ ಪಿ.ಮಹೇಶ್ ಮಾತನಾಡಿ, ನಂಜನಗೂಡು ಕ್ಷೇತ್ರಕ್ಕೆ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರೂ ಅನುಭವಿ ಶಾಸಕರಂತೆ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಿದ ಕೀರ್ತಿ ಶಾಸಕ ಬಿ.ಹರ್ಷವರ್ಧನ್ ಅವರಿಗೆ ಸಲ್ಲುತ್ತದೆ. ನುಗು ಏತ ನೀರಾವರಿ, ಶ್ರೀಕಂಠೇಶ್ವರಸ್ವಾಮಿ ದೇಗುಲದಲ್ಲಿ ಬೆಳ್ಳಿರಥ ಹಾಗೂ 75 ಕೊಠಡಿಗಳ ಅತಿಥಿಗೃಹ, ಹೆಡಿಯಾಲ ಭಾಗದ 13 ಕೆರೆಗಳಿಗೆ ನೀರು ತುಂಬಿಸುವಂತಹ ಮಹತ್ವಕಾಂಕ್ಷಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನೋಪಯೋಗಿ ಶಾಸಕರಾಗಿ ಛಾಪು ಮೂಡಿಸಿದ್ದಾರೆ ಎಂದು ಹೇಳಿದರು.
ಹರತಲೆ ಗ್ರಾಮದಲ್ಲಿ ಹುಟ್ಟುಹಬ್ಬ ಆಚರಣೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಚಿಕ್ಕರಂಗನಾಯ್ಕ ಮಾತನಾಡಿ, ಹುಟ್ಟುಹಬ್ಬವನ್ನು ಯಾವುದೇ ಅಬ್ಬರ, ಆಡಂಬರವಿಲ್ಲದೆ ಆಚರಿಸಬೇಕೆಂಬುದು ಶಾಸಕ ಬಿ.ಹರ್ಷವರ್ಧನ್ ಅವರ ನಿಲುವಾಗಿತ್ತು. ನಾವು ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣಗೊಳಿಸುವ ಸಲುವಾಗಿ ಐದು ವರ್ಷಗಳಿಂದ ಹಲವು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ಹಿರಿಯ ಮುಖಂಡ ಕುಂಬ್ರಹಳ್ಳಿ ಸುಬ್ಬಣ್ಣ ಮಾತನಾಡಿ, ಶಾಸಕರ ಹುಟ್ಟುಹಬ್ಬವನ್ನು ಅರ್ಥಪೂರ್ಣಗೊಳಿಸಲು ಕಾರ್ಯಕರ್ತರು ಕ್ಷೇತ್ರದೆಲ್ಲೆಡೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಿರುವ ಶಾಸಕ ಹರ್ಷವರ್ಧನ್ ಅವರು ಸಾರ್ವಜನಿಕ ಜೀವನದಲ್ಲಿ ಇನ್ನಷ್ಟು ಉತ್ತುಂಗ ಶಿಖರಕ್ಕೆ ಏರಲಿ ಎಂದು ಆಶಿಸಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎಸ್.ಮಹದೇವಪ್ಪ, ಮಾಜಿ ಸದಸ್ಯರಾದ ಹೆಮ್ಮರಗಾಲ ಶಿವಣ್ಣ, ಬಿ.ಎಂ.ರಾಮು, ಮುಖಂಡರಾದ ಶಿರಮಳ್ಳಿ ಮಹದೇವಸ್ವಾಮಿ, ಶಿವಣ್ಣ, ಅಬ್ದುಲ್ ರಜಾಕ್, ಪ್ರಜ್ವಲ್ ಶಶಿ, ಸುರೇಶ್, ಜ್ಯೋತಿ ಲಿಂಗರಾಜು, ನಾಗರಾಜು ಸೇರಿದಂತೆ ಹಲವರಿದ್ದರು.