ಜ್ಞಾನದ ಭಂಡಾರವೇ ತುಂಬಿದೆ ಎನ್ನಬಹುದಾದ ಸಾಮಾಜಿಕ ಮಾಧ್ಯಮವನ್ನು ಸದ್ಬಳಕೆ ಮಾಡಿಕೊಳ್ಳುವುದು ಇಂದಿನ ದಿನಮಾನದಲ್ಲಿ ಬಹಳ ಅಗತ್ಯವಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಡಿ.ಎಸ್.ಸದಾಶಿವಮೂರ್ತಿ ಅಭಿಪ್ರಾಯಪಟ್ಟರು.
ನಗರದ ಆರ್‌ಟಿಒ ಕಚೇರಿ ಸಮೀಪವಿರುವ ಜೆಎಸ್‌ಎಸ್ ವಿದ್ಯಾರ್ಥಿನಿಲಯ (ಪ್ರಧಾನ ಭವನ)ದಲ್ಲಿ ‘ಸಾಮಾಜಿಕ ಮಾಧ್ಯಮಗಳಿಂದ ಜೀವನ ಮೌಲ್ಯಗಳು ಕುಸಿಯುತ್ತಿವೆಯೆ’ ವಿಷಯ ಕುರಿತು ಏರ್ಪಡಿಸಿದ್ದ ಅಂತರ ವಿದ್ಯಾರ್ಥಿನಿಲಯಗಳ ಚರ್ಚಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ನಾವು ಜಾಗತೀಕರಣಗೊಂಡಿರುವ ಪ್ರಪಂಚದಲ್ಲಿ ಜೀವನ ಮಾಡುತ್ತಿದ್ದೇವೆ. ಇದರೊಂದಿಗೆ ವಿಶ್ವವೇ ಪುಟ್ಟ ಗ್ರಾಮ ಎನ್ನುವ ಪರಿಕಲ್ಪನೆಯೂ ಪ್ರಚಲಿತವಾಗಿರುವ ಕಾಲಘಟ್ಟದಲ್ಲಿ ಇದ್ದೇವೆ. ಈ ಹಿನ್ನೆಲೆಯಲ್ಲಿ ಮಾಹಿತಿ ಎನ್ನುವುದಕ್ಕೆ ಸೀಮಿತ ಎಲ್ಲೆ ಇಲ್ಲ. ಒಂದು ವಿಷಯವು ಕ್ಷಣಾರ್ಧದಲ್ಲಿ ಇಡೀ ಜಗತ್ತಿನ ಎಲ್ಲ ಮೂಲೆಗೂ ತಲುಪಿಬಿಡುತ್ತದೆ. ಆದ್ದರಿಂದ ಯಾವ ವಿಷಯವನ್ನು ಅನುಕರಣೆ ಮಾಡಬೇಕು, ಯಾವ ವಿಷಯವನ್ನು ದೂರ ಸರಿಸಬೇಕು ಎನ್ನುವ ಜಾಗೃತ ಮನಸ್ಸು ನಮ್ಮದಾಗಬೇಕು. ಆಗಮಾತ್ರ ನಮ್ಮ ಜೀವನ ಮೌಲ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.
ಈಗಂತೂ ಅಬಾಲವೃದ್ಧರಾದಿಯಾಗಿ ಎಲ್ಲರ ಕೈಯಲ್ಲೂ ಮೊಬೈಲ್ ಇದೆ. ಮಾಹಿತಿ ನೀಡುವಂತಹ ನೂರಾರು ಆ್ಯಪ್‌ಗಳು ಅದರಲ್ಲಿ ಅಡಕವಾಗಿವೆ. ಅವುಗಳಲ್ಲಿ ಉತ್ತಮ ವಿಚಾರ, ಇತಿಹಾಸ, ಸಾಮಾಜಿಕ ಮೌಲ್ಯ ಸಾರುವ, ಕಲೆ-ಸಂಸ್ಕೃತಿಯನ್ನು ಬಿಂಬಿಸುವ ವೇದಿಕೆಗಳು ಇರುತ್ತವೆ. ಅದೇ ರೀತಿ ಮನಸ್ಸನ್ನು ಕಲುಷಿತಗೊಳಿಸುವ, ನೈತಿಕವಲ್ಲದ ವಿಷಯಗಳನ್ನು ಬಿಂಬಿಸುವ ವೇದಿಕೆಗಳು ಇವೆ. ಆದರೆ ಇವುಗಳಲ್ಲಿ ಆಯ್ಕೆ ನಮ್ಮದಾಗಿರಬೇಕು. ನಮ್ಮ ಜೀವನಕ್ಕೆ, ಪರಿಸರಕ್ಕೆ, ನಮ್ಮ ಬದುಕಿನ ಉನ್ನತಿಗೆ ಯಾವುದು ಸೂಕ್ತ ಎನ್ನುವುದನ್ನು ಮೊದಲು ನಾವು ಅರಿತುಕೊಳ್ಳಬೇಕು. ಆಗಮಾತ್ರ ತಂತ್ರಜ್ಞಾನದ ಸೌಲಭ್ಯವನ್ನು ನಿರ್ವಹಣೆ ಮಾಡುವ ಕಲೆ ನಮಗೆ ಸಿದ್ಧಿಸುತ್ತದೆ ಎಂದರು.
ಉತ್ತಮ ಸಂಭಾಷಣೆ-ಸಂವಹನಕ್ಕೆ ಚರ್ಚಾ ಸ್ಪರ್ಧೆಯು ಉತ್ತಮ ವೇದಿಕೆಯಾಗಿದೆ. ಈ ಸ್ಪರ್ಧೆಯಿಂದ ವಿಷಯ ಸಂಗ್ರಹಣೆ, ವಿಷಯಗಳ ಮಂಡನೆ ಹಾಗೂ ವಿಶ್ಲೇಷಣೆಯ ಕ್ರಮವನ್ನು ಭಾಗವಹಿಸಿದವರು ಕಲಿಯಬಹುದು. ಜತೆಗೆ ಸಭಾಕಂಪನ ನಿವಾರಣೆಯನ್ನೂ ಮಾಡಿಕೊಳ್ಳಬಹುದು ಎಂದರು.
ಇದೇ ಸಂದರ್ಭದಲ್ಲಿ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ಸಂದೀಪ್ (ಪ್ರಥಮ), ರಘುನಂದನ್ (ದ್ವಿತೀಯ) ಆನಂದ್ (ತೃತೀಯ) ಅವರಿಗೆ ಬಹುಮಾನ ನೀಡಲಾಯಿತು.
ಅಧ್ಯಕ್ಷತೆಯನ್ನು ಡಾ.ಎಂ ನಂಜುಂಡಪ್ಪ ವಹಿಸಿದ್ದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಶಿವಕುಮಾರಸ್ವಾಮಿ, ಮಹೇಶ್ ದಳಪತಿ, ಸಂತೋಷ್, ನಂಜುಂಡಸ್ವಾಮಿ, ನಿಲಯಪಾಲಕ ಡಾ.ಎನ್.ಮಹದೇವಸ್ವಾಮಿ, ವ್ಯವಸ್ಥಾಪಕ ಕೆ.ಆರ್.ಸತೀಶ್, ಪ್ರದೀಪ್ ಮತ್ತಿತರರು ಹಾಜರಿದ್ದರು.