ಎಲ್ಲರನ್ನು ಅಪ್ಪಿಕೊಂಡು, ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಟ್ಟು, ಎಲ್ಲರ ಕಷ್ಟ ಸುಖದಲ್ಲಿ ಭಾಗಿಯಾಗಿ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿರುವ ಪರಂಪರೆ ನಮ್ಮ ಸಮುದಾಯಕ್ಕೆ ಇದೆ. ನಾವೆಲ್ಲರೂ ಸೇರಿ ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕಿದೆ ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್‌ಕ್ಲೇವ್ ಸಮಾರೋಪ ಸಮಾರಂಭದಲ್ಲಿ ಹೇಳಿದರು.
ಮುಂದೆ ಮನುಕುಲಕ್ಕೆ ಪರಿಸರ ಮಾಲಿನ್ಯ ಸಮಸ್ಯೆ ಕಾಡಲಿದೆ. ಅದರ ವಗ್ಗೆ ಅರಿವು ಮೂಡಿಸಬೇಕು. ಪರಿಸರ ಕಳಕಳಿ ಇಟ್ಟು ಕೆಲಸ ಮಾಡಬೇಕು. ಪ್ರಕೃತಿ, ಪರಿಸರ, ವನ್ಯಜೀವಿಗಳನ್ನು ರಕ್ಷಿಸಬೇಕು. ಪರಿಸರ ಸ್ನೇಹಿ ಉದ್ಯಮಗಳನ್ನು ಸ್ಥಾಪಿಸಬೇಕು. ನನ್ನ ಕಡೆಯಿಂದ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದರು.
ಇಡೀ ದೇಶಕ್ಕೆ ಸಾಮಾಜಿಕ ನ್ಯಾಯ ಕೊಟ್ಟಂತಹ ನಮ್ಮ ಸಮುದಾಯ ಇಂದು ಮೀಸಲಾತಿ ಕೊಡಿ, ಸಾಮಾಜಿಕ ನ್ಯಾಯ ಕೊಡಿ ಎಂದು ಬೇಡುವ ಸ್ಥಿತಿ ಬಂದಿದೆ. ಆದ್ದರಿಂದ ಬರೇ ಪ್ರತಿಭಾವಂತವರಿಗೆ ಉದ್ಯೋಗ ನೀಡಿದರೆ ಸಾಮಾಜಿಕ ನ್ಯಾಯ ಸಿಗಲ್ಲ. ಗ್ರಾಮಾಂತರ ಪ್ರದೇಶದ ಬಡವರು, ದುರ್ಬಲರಿಗೆ ನೀಡಬೇಕು ಎಂದರು.
ಮೂರು ದಿನಗಳ ಕಾಲ ಮೈಸೂರಿನಲ್ಲಿ ಆಯೋಜಿಸಿರುವ ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್‌ಕ್ಲೇವ್ ಕಾರ್ಯಕ್ರಮ ಅಚ್ಚುಕಟ್ಟಾಗಿ ಮಾಡಿದ್ದಾರೆ. ಇಂದು ಬಹಳ ಖುಷಿ ಸಂಗತಿ ಎನಿಸುತ್ತದೆ. ಈ ಹಿಂದೆ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್‌ಕ್ಲೇವ್‌ನಲ್ಲಿ ಭಾಗಿಯಾಗಿದ್ದೆ. ಆದರೆ, ಆ ಎರಡು ಕಡೆಗಿಂತಲೂ ಮೈಸೂರಿನಲ್ಲಿ ಯಶಸ್ವಿಯಾಗಿದೆ ಎಂದರು.
ಇಲ್ಲಿ ನವ ಉದ್ಯಮ, ಸಣ್ಣ ಕೈಗಾರಿಕೆ, ಆರೋಗ್ಯ, ಶಿಕ್ಷಣ ಸೇರಿದಂತೆ ಸೇವಾ ವಲಯ, ಉತ್ಪಾದನಾ ವಲಯದ ಹೊಸ ಹೊಸ ಕೈಗಾರಿಕೆ, ಉತ್ಪಾದನೆಗಳ ಬಗ್ಗೆ ತಿಳಿಸಿಕೊಡಲಾಗಿದೆ. ಸಾವಿರಾರು ಜನ ಇಲ್ಲಿಗೆ ಬಂದು ನೋಡಿದ್ದಾರೆ. ಲಕ್ಷಾಂತರ ಜನ ಮಾಧ್ಯಮ, ಸಾಮಾಜಿಕ ಜಾಲತಾಣಗಳ ಮೂಲಕ ಇದರ ಉಪಯೋಗ ಪಡೆದಿದ್ದಾರೆ ಎಂದರು.
ನಾವುಗಳು ಸಮಾಜದ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತೇವೆ. ನಮ್ಮ ರಾಜ್ಯವಲ್ಲದೇ ದೇಶದ ನಾನಾ ಭಾಗದಲ್ಲೂ ಕಾರ್ಯಕ್ರಮ ಆಯೋಜಿಸುತ್ತೇವೆ. ಆದರೆ, ನಾವು ಬಸವ ಜಯಂತಿ, ಶರಣರ ಜಯಂತಿ, ವಚನ ವಿಜಯೋತ್ಸವ ಉತ್ಸವ, ನಮ್ಮ ಸಮುದಾಯ ನಡೆದಾಡುವ ದೇವರುಗಳ ಸ್ಮರಣೋತ್ಸವ ಕಾರ್ಯಕ್ರಮಗಳನ್ನು ಮಾಡುತ್ತೇವೆ. ಆದರೆ, ನೀವುಗಳು ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್‌ಕ್ಲೇವ್ ಮಾಡುತ್ತಿರುವುದು ಶ್ಲಾಘನೀಯ. ಇದು ನಮ್ಮ ಯುವಕರಿಗೆ ಸ್ಫೂರ್ತಿ ಸಿಗುವ ಕಾರ್ಯಕ್ರಮವಾಗಿದೆ ಎಂದರು.