ಎಚ್.ಡಿ.ಕೋಟೆ: ಇಂದಿರಾಗಾಂಧಿಯವರ ಉಳುವವನೇ ಭೂಮಿಯ ಒಡೆಯ ಎಂಬ ಕಾನೂನನ್ನು ಯಥಾವತ್ತಾಗಿ ಜಾರಿಗೆ ತಂದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಸಾಮಾಜಿಕ ಕ್ರಾಂತಿಯ ಹರಿಕಾರ ಎಂದು ಶಾಸಕ ಅನಿಲ್ ಚಿಕ್ಕಮಾದು ಬಣ್ಣಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಭಾನುವಾರ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಡಿ.ದೇವರಾಜು ಅರಸು ಅವರ 108ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಏಳು ವರ್ಷಗಳ ಕಾಲ ಸುದೀರ್ಘವಾಗಿ ಮುಖ್ಯ ಮಂತ್ರಿಯಾಗಿ ಕೆಲಸ ಮಾಡಿದ ಅರಸು ಅವರು, ಹಿಂದುಳಿದ ವರ್ಗಗಳನ್ನು ಮೇಲೆತ್ತುವ ಕೆಲಸ ಮಾಡಿದರು. ಅರಸು ಅವರಂತಹ ಮತ್ತೊಬ್ಬ ನಾಯಕ ಹುಟ್ಟಿಬರಲು ಸಾಧ್ಯವಿಲ್ಲ ಎಂದರು.
ತಾಲೂಕಿನಲ್ಲಿ ಡಿ.ದೇವರಾಜು ಅರಸು ಸಮುದಾಯ ಭವನ ನಿರ್ಮಾಣದ ಜತೆಗೆ ಅರಸು ಅವರ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲು ಈಗಾಗಲೇ ಸ್ಥಳ ಗುರುತಿಸಲಾಗಿದೆ. ಶೀಘ್ರ ಭವನ ನಿರ್ಮಾಣಕ್ಕೆ ಕ್ರೃಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.