ಬೆಂಗಳೂರು:
ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಸಿದ್ಧತೆ ನಡೆಸುವ ಹಿನ್ನೆಲೆಯಲ್ಲಿ ಕರ್ತವ್ಯ ನಿರತ ಶಿಕ್ಷಕರ, ಖಾಲಿ ಹುದ್ದೆಗಳ ಮಾಹಿತಿ ಕಳುಹಿಸಿಕೊಡುವ ಪ್ರಕ್ರಿಯೆ ಬಗ್ಗೆ ಇರುವ ಗೊಂದಲ ನಿವಾರಣೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಶುಕ್ರವಾರ ಜಿಲ್ಲಾ ಉಪನಿರ್ದೇಶಕರ ಜತೆಗೆ ವಿಡೀಯೋ ಕಾನ್ಫರೆನ್ಸ್ ನಡೆಸಿತು.
ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕಿ ಸಿರಿಯಣ್ಣನವರ್ ಲಲಿತಾ ಚಂದ್ರಶೇಖರ್, ಅವರು ಉಪ ನಿರ್ದೇಶಕರೊಂದಿಗೆ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿ ವರ್ಗಾವಣೆ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುವ ಹಿನ್ನೆಲೆಯಲ್ಲಿ ಶಿಕ್ಷಕರ ಮಾಹಿತಿಯ ಅವಶ್ಯಕತೆ ಇರುವುದರಿಂದ ಅತ್ಯಂತ ತುರ್ತು ಮತ್ತು ನಿಖರವಾಗಿ ಮಾಹಿತಿ ಕಳುಹಿಸಿಕೊಡುವಂತೆ ಸೂಚನೆ ನೀಡಿದರು. ಮಾಹಿತಿಯನ್ನು ನೀಡಲು ಈ ಹಿಂದೆಯೇ ಸೆ.16ರಂದು ಕೊನೆಯ ದಿನವೆಂದು ಸೂಚನೆ ನೀಡಿತ್ತು. ಈಗಾಗಲೇ ಪದೇ ಪದೇ ಶಿಕ್ಷಕರು ಕೇಳುವ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿ ವೆಬ್‌ಸೈಟ್‌ಗೂ ಅಪ್‌ಲೋಡ್ ಮಾಡಲಾಗಿತ್ತು. ಅದರೂ, ಮಾಹಿತಿ ಸಂಗ್ರಹಿಸುವಲ್ಲಿ ಹಲವು ಗೊಂದಲಗಳಿದ್ದರಿಂದ ಅವರು ರಾಜ್ಯ ಕಚೇರಿಗೆ ಇ-ಮೇಲ್ ಮಾಡಿ ಕೇಳುತ್ತಿದ್ದರು. ಇದರಿಂದ ಸಮಸ್ಯೆಗೆ ಪರಿಹಾರ ನೀಡಲು ವೀಡಿಯೋ ಕಾನ್ಫರೆನ್ಸ್ ನಡೆಸಲಾಗಿತ್ತು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.