ನ್ಯೂಸ್

ಸಾಧಕರನ್ನು ಗುರುತಿಸಿ ಗೌರವಿಸುವುದು ಸಮಾಜದ ಕರ್ತವ್ಯ

ನಂಜನಗೂಡು: ಸಮಾಜ ಸೇವೆಯಲ್ಲಿ ಎಲೆಮರೆ ಕಾಯಿಯಂತೆ ಶ್ರಮಿಸುವ ಸಾಧಕರನ್ನು ಗುರುತಿಸಿ ಗೌರವಿಸುವುದು ಸಮಾಜದ ಕರ್ತವ್ಯ ಎಂದು ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು.


ತಾಲೂಕಿನ ಹರತಲೆ ಗ್ರಾಮದ ನಾಯಕರ ಸಮುದಾಯ ಭವನದಲ್ಲಿ ಸಿ.ಚಿಕ್ಕರಂಗನಾಯ್ಕ ಅಭಿಮಾನಿಗಳ ಬಳಗದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಆಶಾಕಿರಣವಾಗಿದ್ದ ದಿವಂಗತ ಡಿ.ಟಿ.ಜಯಕುಮಾರ್ ಹಾದಿಯಲ್ಲಿ ನಡೆಯುತ್ತ ತಾಲೂಕಿನ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಚಿಕ್ಕರಂಗನಾಯ್ಕ ಅವರು ಡಿ.ಟಿ. ಜಯಕುಮಾರ್ ಹೆಸರನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಹರತಲೆ ಗ್ರಾಮದ ಅಂಗವಿಕಲ ಮಹಿಳೆ ರಾಜಮ್ಮನಿಗೆ 2.5 ಲಕ್ಷ ರೂ.ವೆಚ್ಚದಲ್ಲಿ ಮನೆ ನಿರ್ಮಿಸಿಕೊಟ್ಟಿದ್ದರು. ಬಡವರ, ದೀನ ದಲಿತರ ಸೇವೆಯಿಂದ ಮಾತ್ರ ರಾಜಕೀಯ ಬದುಕಿನ ಸಾರ್ಥಕತೆ ಅಡಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಕಾರ್ಯ ಒತ್ತಡದ ನಡುವೆ ಕ್ಷೇತ್ರಕ್ಕೆ ಆಗಮಿಸಿ 1,691 ಜನ ಅಂಗವಿಕಲರಿಗೆ ಸಾಧನ-ಸಲಕರಣೆಗಳನ್ನು ವಿತರಿಸುವ ಮೂಲಕ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂದು ಹೇಳಿದರು.


ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಚಿಕ್ಕರಂಗನಾಯ್ಕ ಮಾತನಾಡಿ, ಅಭಿಮಾನಿ ಬಳಗದ ಸದಸ್ಯರು ಪ್ರತಿವರ್ಷ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುವುದು ಸಂತೋಷ ತಂದಿದೆ. ಶಾಸಕ ಹರ್ಷವರ್ಧನ್ ಕ್ಷೇತ್ರದ ರೈತರ ಬಹುದಿನದ ಕನಸಾದ ನುಗು ಏತ ನೀರಾವರಿ ಯೋಜನೆಯನ್ನು ಸಾಕಾರಗೊಳಿಸುತ್ತಿದ್ದಾರೆ. 700 ಕೋಟಿ ರೂ.ಗಳಿಗೂ ಹೆಚ್ಚು ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಹೇಳಿದರು.


ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಶಿವನಂಜಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷೆ ಲತಾ ಮುದ್ದುಮೋಹನ್, ಸಾಹಿತಿ ಕಳಲೆ ಜವರನಾಯಕ ಅವರನ್ನು ಸನ್ಮಾನಿಸಲಾಯಿತು. ಮುಖಂಡರಾದ ಹೆಮ್ಮರಗಾಲ ಸೋಮಣ್ಣ, ಮಸಗೆ ರಾಜಣ್ಣ, ಹುಲ್ಲಹಳ್ಳಿ ಶಿವಣ್ಣ, ಶ್ರೀನಿವಾಸರೆಡ್ಡಿ, ಗ್ರಾಪಂ ಅಧ್ಯಕ್ಷೆ ರತ್ನಮ್ಮ ಉಪಸ್ಥಿತರಿದ್ದರು.