ಚಳ್ಳಕೆರೆ: ವಿದ್ಯುತ್ ಕೊರತೆಯಿಂದ ಬೆಳೆಗಳು ಸಂಪೂರ್ಣ ನಾಶವಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿ ಹುಲಿಕುಂಟೆ ಗ್ರಾಮದ ನೂರಾರು ರೈತರು ಸಾಣಿಕೆರೆಯ ವಿದ್ಯುತ್ ಪ್ರಸರಣ ಕೇಂದ್ರಕ್ಕೆ ಗುರುವಾರ ಮುತ್ತಿಗೆ ಹಾಕಿದರು.
ಪ್ರತಿ ದಿನ 7 ಗಂಟೆ ಬದಲು 4 ಗಂಟೆ ಮಾತ್ರ ವಿದ್ಯುತ್ ಸರಬರಾಜು ನೀಡಲಾಗುತ್ತಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದೆ ಎಂದರು.
ರಾತ್ರಿ 10 ಗಂಟೆ ನಂತರ 2 ತಾಸು ಕರೆಂಟ್ ಕೊಡುತ್ತಿರುವುದರಿಂದ ರೈತರ ಬದುಕು ದುಸ್ತರವಾಗಿವೆ. ಕಾಡು ಪ್ರಾಣಿಗಳು, ವಿಷಜಂತುಗಳ ಭೀತಿಯಲ್ಲಿ ನೀರು ಹಾಯಿಸುವುದು ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡರು. ಈ ಕೂಡಲೇ ಸರ್ಕಾರ ರೈತರ ಸಮಸ್ಯೆ ಬಗೆಹರಿಸದಿದ್ದರೆ ಹೆದ್ದಾರಿ ತಡೆ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮನವಿ ಪತ್ರ ಸ್ವೀಕರಿಸಿದ ವಿಭಾಗೀಯ ಎಸ್‌ಒ ವಿರೂಪಾಕ್ಷಪ್ಪ, ನಮ್ಮ ಘಟಕದ ವ್ಯಾಪ್ತಿಗೆ ಬರುವ 25 ಹಳ್ಳಿಗಳ ರೈತರ ಸಮಸ್ಯೆ ಕುರಿತು ಮೇಲಧಿಕಾರಿಗೆ ವರದಿ ಸಲ್ಲಿಸಲಾಗುವುದು. ಅವರ ಮಾರ್ಗದರ್ಶನ ದಂತೆ ವಿದ್ಯುತ್ ಸರಬರಾಜಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಗ್ರಾಪಂ ಸದಸ್ಯ ಎಸ್.ವಿ.ಮಧು, ರೈತರಾದ ಟಿ.ಆರ್.ರಂಗಸ್ವಾಮಿ, ದೊಡ್ಡಯ್ಯ, ಅಂಬಣ್ಣ, ವೀರಣ್ಣ, ರವಿಕುಮಾರ್, ನಾಗರಾಜ್, ಜೆ.ಆರ್.ಗೌಡ, ವೀರಣ್ಣ, ರಾಜಣ್ಣ ಇತರರಿದ್ದರು.