ಸರಗೂರು: ಉಳುಮೆ ಮಾಡಿದ ಭೂಮಿಗೆ ಸಾಗುವಳಿ ಪತ್ರ ವಿತರಿಸಬೇಕು, ಅತಿವೃಷ್ಟಿಯಿಂದಾಗಿ ವಾಸದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ಮಂಜೂರು ಮಾಡಿಕೊಡುವುದು ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸುವಂತೆ ದಲಿತ ಸಂಘರ್ಷ ಸಮಿತಿ(ವಿ.ನಾಗರಾಜು ಬಣ) ಎಚ್.ಡಿ.ಕೋಟೆ, ಸರಗೂರು ತಾಲೂಕು ಸಂಯೋಜಕ ಸಮಿತಿ ಒತ್ತಾಯಿಸಿದೆ.
ತಹಸೀಲ್ದಾರ್ ಪರಶಿವಮೂರ್ತಿ ಅವರಿಗೆ ಪದಾಧಿಕಾರಿಗಳು ಸೋಮವಾರ ಮನವಿ ಪತ್ರ ಸಲ್ಲಿಸಿದರು. ಶೋಷಿತ ಸಮುದಾಯ ಭೂಮಿ, ವಸತಿ ಮತ್ತು ನಾಗರಿಕ ಸೌಲಭ್ಯಗಳಿಂದ ವಂಚಿತವಾಗಿದೆ. ಎಲ್ಲ ಸಮಸ್ಯೆಗಳನ್ನು ಕಂದಾಯ ಇಲಾಖೆ ಶೀಘ್ರದಲ್ಲೇ ಬಗೆಹರಿಸಬೇಕು. ಇಲ್ಲವಾದಲ್ಲಿ ಕಂದಾಯ ಇಲಾಖೆ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ದಸಂಸ ಸಂಯೋಜಕ ಸಮಿತಿ ತಾಲೂಕು ಸಂಯೋಜಕ ಹುನಗಹಳ್ಳಿ ಕೆ.ಗೋವಿಂದ ಮಾತನಾಡಿ, ಬಗರ್‌ಹುಕುಂ ಜಮೀನುಗಳಿಗೆ ಸಾಗುವಳಿ ಪತ್ರ ನೀಡುವಂತೆ ಹಲವಾರು ವರ್ಷಗಳಿಂದ ಮನವಿ ಮಾಡುತ್ತಾ ಬಂದಿದ್ದರೂ ಕಂದಾಯ ಇಲಾಖೆ ಸಾಗುವಳಿ ಪತ್ರ ನೀಡುವಲ್ಲಿ ಮುಂದಾಗುತ್ತಿಲ್ಲ. ಅಲ್ಲದೆ ಅತಿಯಾದ ಮಳೆಯಿಂದಾಗಿ ವಾಸದ ಮನೆಗಳು ಸಂಪೂರ್ಣವಾಗಿ ನೆಲಕ್ಕುರುಳಿ, ನಿವಾಸಿಗಳು ಬೀದಿ ಪಾಲಾಗಿದ್ದರು. ಸಂಬಂಧಪಟ್ಟ ಇಲಾಖೆಗಳು ವಸತಿ ವಂಚಿತರಿಗೆ ಮನೆ ನಿರ್ಮಿಸಿಕೊಳ್ಳಲು ಕ್ರಮವಹಿಸಬೇಕು. ಇದಲ್ಲದೆ ಹಳ್ಳಿಗಳಲ್ಲಿ ರೈತರು ಓಡಾಡುವ ಸರ್ಕಾರಿ ರಸ್ತೆ ಸರಿಪಡಿಸಬೇಕು. ಕೆರೆ ಒತ್ತುವರಿ ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.
ಸಮಿತಿ ಉಪ ಸಂಘಟನಕಾರರಾದ ಮಹೇಶ್‌ಕುಮಾರ್, ಕುಮಾರ್, ಶಿವಣ್ಣ, ತಾಲೂಕು ಮಹಿಳಾ ಒಕ್ಕೂಟ ಸಂಯೋಜಕಿ ರಾಜಮ್ಮ, ಸಾವಿತ್ರಮ್ಮ ಹಾಗೂ ಪದಾಧಿಕಾರಿಗಳು ಹಾಜರಿದ್ದರು.