ನಿಪ್ಪಾಣಿ: ಸಚಿವೆ ಶಶಿಕಲಾ ಜೊಲ್ಲೆ ಅವಧಿಯಲ್ಲಿ ನಿಪ್ಪಾಣಿ ಮತಕ್ಷೇತ್ರ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ ಎಂದು ಕೊಲ್ಲಾಪುರದ ಸಂಸದ ಧನಂಜಯ ಮಹಾಡಿಕ ಹೇಳಿದರು. ಇಲ್ಲಿನ ಜೊಲ್ಲೆ ಶಿಕ್ಷಣ ಸಂಕೀರ್ಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿವಪುತ್ರ ಸಂಭಾಜಿ ಮಹಾನಾಟಕದ ನಾಲ್ಕನೇ ದಿನದ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಸಚಿವೆ ಶಶಿಕಲಾ ಮೂರನೇ ಅವಧಿಗೆ ಆಯ್ಕೆಯಾದರೆ ನಿಪ್ಪಾಣಿ ಇನ್ನಷ್ಟು ಅಭಿವೃದ್ಧಿಪಡಿಸುವರೆಂಬ ವಿಶ್ವಾಸವಿದೆ ಎಂದರು. ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಸಂಭಾಜಿ ಮಹಾರಾಜರ ಹೋರಾಟಗಳು ಅವಿಸ್ಮರಣೀಯವಾಗಿದೆ. ಅಲ್ಪಕಾಲದ ಆಳ್ವಿಕೆಯಲ್ಲಿ ವೈರಿಗಳ ವಿರುದ್ಧ ವೀರಾವೇಶದಿಂದ ಹೋರಾಡಿ ಸಾಮ್ರಾಜ್ಯ ರಕ್ಷಣೆ ಮಾಡಿದ ಇತಿಹಾಸ ಯುವ ಸಮುದಾಯಕ್ಕೆ ಪ್ರೇರಣೆಯಾಗಿದೆ. ಮಹಾರಾಜರು ತೋರಿದ ಪರಾಕ್ರಮ ಮಹಾನಾಟಕದ ಮೂಲಕ ಮನೋಜ್ಞವಾಗಿ ಪ್ರದರ್ಶಿಸಲಾಯಿತು ಎಂದರು. ನಿಡಸೋಸಿಯ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಚಿಕ್ಕೋಡಿಯ ಚರಮೂರ್ತಿಮಠದ ಸಂಪಾದನಾ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿದರು. ಬಜರಂಗದಳದ ಉತ್ತರ ಕರ್ನಾಟಕದ ಪ್ರಮುಖ ವಿಠ್ಠಲ, ಮೇತಕೆಯ ಸದ್ಗುರು ಬಾಳುಮಾಮಾ ದೇವಸ್ಥಾನ ಸಮಿತಿ ಅಧ್ಯಕ್ಷ ಭೋಸಲೆ, ಸಂಕೇಶ್ವರದ ಶಿವ ಪ್ರತಿಷ್ಠಾನದ ಅಧ್ಯಕ್ಷ ಬಂಡು ಹತ್ತೂರೆ, ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ, ಬಸವಪ್ರಸಾದ ಜೊಲ್ಲೆ, ವಿಜಯ ರಾವುತ ಇತರರು ಇದ್ದರು.