ನ್ಯೂಸ್

ಸಹೋದರನಿಗೂ ಅನುಕಂಪದ ಉದ್ಯೋಗ : ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು:  ಉದ್ಯೋಗಿಯ ಪತ್ನಿ ಉದ್ಯೋಗ ಹೊಂದುವ ಮೊದಲೇ ಮರಣ ಹೊಂದಿದ್ದರೆ ಮತ್ತು ದಂಪತಿಗೆ ಮಕ್ಕಳಿಲ್ಲದಿದ್ದರೆ ಮೃತ ವ್ಯಕ್ತಿಯ ಸಹೋದರನಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ತಿರಸ್ಕರಿಸುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಬಳ್ಳಾರಿ ವಿಭಾಗದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಹೊರಡಿಸಿದ ಅನುಮೋದನೆ ರದ್ದು ಕೋರಿ ಸಂಸ್ಥೆಯಲ್ಲಿ ನೌಕರನಾಗಿದ್ದ ವೀರೇಶ್ ಮಂತಪ್ಪ ಲೋಲಾಸರ್ ಅವರ ತಾಯಿ, ಸಹೋದರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಸೂರಜ್ ಗೋವಿಂದ್ ರಾಜು ಅವರ ಏಕಸದಸ್ಯ ಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ ಮೃತ ವೀರೇಶ್ ಪತ್ನಿ ಆತನಿಗೂ ಮೊದಲೇ ಮೃತಪಟ್ಟಿದ್ದು, ದಂಪತಿಗೆ ಮಕ್ಕಳಿಲ್ಲ. ವೀರೇಶ್ ಅರ್ಜಿದಾರರ ಕುಟುಂಬವನ್ನು ಸಲಹುತ್ತಿದ್ದರು. ಈ ಎಲ್ಲ ಅಂಶ ಪರಿಗಣಿಸಿ ಅರ್ಜಿ ಮಾನ್ಯ ಮಾಡುವಂತೆ ಕೋರಿದರು. ಕೆಕೆಆರ್‌ಟಿಸಿ ಪರ ಹಾಜರಿದ್ದ ವಕೀಲರು ಮೃತ ವ್ಯಕ್ತಿ ಮದುವೆಯಾಗಿದ್ದರು. ನಿಯಮದ ಅನ್ವಯ ಮೃತರ ಪತ್ನಿ ಮತ್ತು ಮಕ್ಕಳ ಹೊರತಾಗಿ ಬೇರಾರೂ ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆಯಲು ಅರ್ಹರಲ್ಲ. ಹೀಗಾಗಿ ಅರ್ಜಿ ವಜಾಗೊಳಿಸುವಂತೆ ಮನವಿ ಮಾಡಿದರು.

ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ ಉದ್ಯೋಗಿಯ ಪತ್ನಿ ಉದ್ಯೋಗ ಹೊಂದುವ ಮೊದಲೇ ಮರಣ ಹೊಂದಿದ್ದರೆ ಮತ್ತು ದಂಪತಿಗೆ ಮಕ್ಕಳಿಲ್ಲದಿದ್ದರೆ ಮೃತ ವ್ಯಕ್ತಿಯ ಸಹೋದರನಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ತಿರಸ್ಕರಿಸುವಂತಿಲ್ಲ ಎಂದಿದೆ. ಜತೆಗೆ ಅರ್ಜಿದಾರರ ವಿದ್ಯಾರ್ಹತೆ ಅನುಗುಣವಾಗಿ ಅನುಕಂಪದ ಆಧಾರದ ಮೇಲೆ 12 ವಾರಗಳಲ್ಲಿ ಅವರನ್ನು ಸೂಕ್ತ ಹುದ್ದೆಗೆ ನೇಮಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸುವ ಮುಖೇನ ಅರ್ಜಿ ಮಾನ್ಯಗೊಳಿಸಿದೆ.