ಹುಣಸೂರು: ಸಮಾಜದಲ್ಲಿ ಸಂಬಂಧಗಳು ಮುರಿದುಹೋಗಿದ್ದು, ಮನುಷ್ಯರ ಹೃದಯದ ನಡುವೆ ಸಹಿಷ್ಣುತೆಯ ಸೇತುವೆಗಳನ್ನು ತುರ್ತಾಗಿ ನಿರ್ಮಿಸಬೇಕಿದೆ ಎಂದು ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮೋದೂರು ಮಹೇಶಾರಾಧ್ಯ ಅಭಿಪ್ರಾಯಪಟ್ಟರು.
ಶರಣ ಸಾಹಿತ್ಯ ಪರಿಷತ್ ಮತ್ತು ತಾಲೂಕು ಪತ್ರಕರ್ತರ ಸಂಘದ ಸಹಯೋಗದಲ್ಲಿ ನಗರದ ಮಹಾವೀರ ಬಿ.ಇಡಿ ಕಾಲೇಜಿನಲ್ಲಿ ಆಯೋಜಿಸಿದ್ದ ಶರಣದ ವೈಚಾರಿಕ ನಡಿಗೆ ವಿದ್ಯಾರ್ಥಿಗಳೆಡೆಗೆ ಸರಣಿ ಉಪನ್ಯಾಸ ಮಾಲಿಕೆ ಉದ್ಘಾಟಿಸಿ ಮಾತನಾಡಿದರು. ಮುರಿದುಹೋದ ಮನಸ್ಸುಗಳನ್ನು ಒಂದುಗೂಡಿಸಲು ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೊಂದೇ ಮಾರ್ಗ ಎಂದರು.
ಸಂಶೋಧನಾರ್ಥಿ ರೇಣುಕಾಪ್ರಸಾದ್ ಮಾತನಾಡಿದರು. ಕವಿ ಕುಮಾರ್ ಹೊನ್ನೇನಹಳ್ಳಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಕುಮಾರ್, ಕಾಲೇಜಿನ ಪ್ರಾಂಶುಪಾಲ ಡಾ.ಬಸವರಾಜು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.