ತೀರ್ಥಹಳ್ಳಿ: ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯದಂತೆ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವ ಸೌಹಾರ್ದ ಸಹಕಾರಿ ವ್ಯವಸ್ಥೆಯಲ್ಲಿ ಸರ್ಕಾರದ ಹಸ್ತಕ್ಷೇಪದಿಂದ ಹಿನ್ನಡೆ ಉಂಟಾಗಲಿದೆ ಎಂದು ಪಟ್ಟಣದ ಸರಸ್ವತಿ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ವಿದ್ಯಾಧಿರಾಜ ಸಭಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸರಸ್ವತಿ ಸೌಹಾರ್ದ ಸಹಕಾರ ಸಂಘದ 16ನೇ ವರ್ಷದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಸಹಕಾರ ಕಾಯ್ದೆಗೆ ತಿದ್ದುಪಡಿ ತರುವ ವಿಚಾರದಲ್ಲಿ ಮರುಪರಿಶೀಲನೆ ನಡೆಸಬೇಕು. ಈ ಬಗ್ಗೆ ಎಲ್ಲ ಸಂಘಗಳು ಒಗ್ಗಟ್ಟಾಗಿ ಸರ್ಕಾರದ ಈ ನಿರ್ಧಾರದ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮದ ಕುರಿತು ಚಿಂತನೆ ನಡೆಸಬೇಕು ಎಂದರು.
ರಾಜ್ಯದಲ್ಲಿರುವ ಸುಮಾರು 6 ಸಾವಿರಕ್ಕೂ ಹೆಚ್ಚಿನ ಸೌಹಾರ್ದ ಸಹಕಾರ ಸಂಘಗಳಲ್ಲಿ ಬಹುತೇಕ ಸಂಘಗಳು ಸಾಮಾಜಿಕ ಬದ್ಧತೆ ಹೊಂದಿದ್ದು, ಪಾರದರ್ಶಕವಾಗಿಯೂ ಕಾರ್ಯನಿರ್ವಹಿಸುತ್ತಿವೆ. ಅತ್ಯಂತ ಶಿಸ್ತಿನಿಂದ ವ್ಯವಹಾರ ನಡೆಸುವ ಮೂಲಕ ಷೇರುದಾರರ ಹಿತಕ್ಕೆ ಪೂರಕ ಆಗಿರುವುದನ್ನು ಸರ್ಕಾರ ಗಮನಿಸಬೇಕಿದೆ. ಸರಸ್ವತಿ ಸೌಹಾರ್ದ ಸಹಕಾರ ಸಂಘ ಅತ್ಯಂತ ಸುಭದ್ರವಾಗಿದೆ. ಷೇರುದಾರರಿಗೆ ಈ ವರ್ಷ ಶೇ.15 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಿರ್ದೇಶಕರಾದ ಸಂದೇಶ್ ಜವಳಿ, ರಮೇಶ್ ನಾಯಕ್, ಪ್ರಶಾಂತ್, ಕಿರಣ್ ಶೆಣೈ, ನಾಗರಾಜ್ ಕುಕ್ಕೆ, ರಾಜೇಶ್ ಶಿರವಂತೆ, ಶುಭದಾ, ಸಿಇಒ ಅಚ್ಯುತ್ ನಾಯಕ್ ಇದ್ದರು.