ನ್ಯೂಸ್

ಸಹಕಾರ ಸಂಘಗಳ ಗಣಕೀಕರಣ ವಿಳಂಬ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸಿಡಿಮಿಡಿ, ಜ.15ರೊಳಗೆ ಕೆಲಸ ಮುಗಿಸಲು ತಾಕೀತು

ಕೋಲಾರ: ಅವಳಿ ಜಿಲ್ಲೆಯ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಗಣಕೀಕರಣ ಯೋಜನೆಯ ಕೆಲಸ ವಿಳಂಬವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಜ.15ರೊಳಗೆ ಗಣಕೀಕರಣ ಕೆಲಸ ಮುಗಿಸಲು ವಿ-ಸಾಫ್ಟ್ ಸಂಸ್ಥೆ ಸಿಬ್ಬಂದಿಗೆ ತಾಕೀತು ಮಾಡಿದರು.

ಬ್ಯಾಂಕಿನ ಸಭಾಂಗಣದಲ್ಲಿ ಮಂಗಳವಾರ ಬೆಳಿಗ್ಗೆ ಗಣಕೀಕರಣದ ಉಸ್ತುವಾರಿ ವಹಿಸಿಕೊಂಡಿರುವ ಹೈದರಾಬಾದಿನ ವಿ-ಸಾಫ್ಟ್ ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಸಹಕಾರ ಸಂಘಗಳ ಗಣಕೀಕರಣದ ಕಾರ್ಯ ವಿಳಂಬದಿಂದಾಗಿ ನಮ್ಮ ಬಗ್ಗೆ ವಿರೋಧಿಗಳು ವಿನಾ ಕಾರಣ ಟೀಕೆಗೆ ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ತರಾಟೆ ತೆಗೆದುಕೊಂಡರು.

ಜ.15ರೊಳಗೆ ನಿಮಗೆ ನೀಡಿರುವ ಕೆಲಸ ಪೂರ್ಣಗೊಳಿಸಿ ಹೊಸ ಮನ್ವಂತರಕ್ಕೆ ಸಹಕರಿಸಿ ಎಂದು ಕಿವಿಮಾತು ಹೇಳಿ, ಅವಿಭಜಿತ ಜಿಲ್ಲೆಯ ಒಟ್ಟು 193 ಸೊಸೈಟಿಗಳ ಪೈಕಿ 153ರ ಗಣಕೀಕರಣ ಮುಗಿದಿದೆ ಮತ್ತು ಇನ್ನೂ 40 ಸೊಸೈಟಿಗಳ ಗಣಕೀಕರಣ ಬಾಕಿ ಉಳಿಸಿಕೊಂಡಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು.

ಸಹಕಾರ ಸಂಘಗಳ ಪ್ರತಿಯೊಂದು ವಹಿವಾಟು ಕ್ಷಣದಲ್ಲೇ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಗೆ ತಲುಪುವುದರಿಂದ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ. ಸಾಲ ನೀಡಿಕೆ, ವಸೂಲಾತಿ, ಠೇವಣಿ ಸಂಗ್ರಹದ ಇಂಚಿಂಚು ಮಾಹಿತಿ ತಕ್ಷಣ ಆನ್‌ಲೈನ್‌ಗೆ ಬರುವುದರಿಂದ ತಪ್ಪುಗಳಿಗೆ ಅವಕಾಶ ಇರುವುದಿಲ್ಲ, ಹಾಗಾಗಿ ಕೆಲಸ ಬೇಗನೆ ಮುಗಿಸಬೇಕು ಎಂದು ಸೂಚಿಸಿದರು.

ತಾಂತ್ರಿಕ ಕಾರಣ ನೆಪ ಹೇಳಿ ವಿಳಂಬ ಮಾಡಬೇಡಿ, ಸಿಬ್ಬಂದಿ ಕೊರತೆ ಇದ್ದರೆ ಗುತ್ತಿಗೆ ಆಧಾರದಡಿ ನೇಮಿಸಿಕೊಳ್ಳಿ, ನನಗೆ ಸಬೂಬು ಹೇಳುವುದು ಬೇಡ, ಫಲಿತಾಂಶ ನೀಡಿ ಎಂದರು.

ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ಶಿವಕುಮಾರ್, ಪದ್ಮಮ್ಮ, ವಿ-ಸಾಫ್ಟ್ ಅಧಿಕಾರಿಗಳಾದ ಸಿರೀಶ್, ವಿಶ್ವನಾಥ್,ನಾಗೇಶ್ ಉಪಸ್ಥಿತರಿದ್ದರು.

ಸೊಸೈಟಿಯಿಂದ ಯಾವುದೇ ರೈತ ಪಡೆಯುವ ಬೆಳೆಸಾಲ, ಮಧ್ಯಮಾವಧಿ ಸಾಲವಾಗಲಿ, ದೀರ್ಘಾವಧಿ ಸಾಲವಾಗಲಿ, ಎಸ್‌ಎಸ್‌ಜಿಗಳಿಗೆ ನೀಡುವ ಬಡ್ಡಿರಯಿತ ಸಾಲವಾಗಲಿ ಮಂಜೂರಾತಿಯಾದ ತಕ್ಷಣವೇ ಆತ ಅಥವಾ ಸದಸ್ಯರ ಉಳಿತಾಯ ಖಾತೆಗೆ ಅಪ್‌ಡೇಟ್ ಆಗಲಿದೆ, ಇದರಿಂದ ಸಾಲ ನೀಡಿಕೆಯಲ್ಲೂ ಪಾರದರ್ಶಕತೆ ಮೂಡಿ ವಿನಾಕಾರಣ ಬ್ಯಾಂಕ್ ಮತ್ತು ಸೊಸೈಟಿ ವಿರುದ್ದ ಸುಳ್ಳು ಆರೋಪ ಮಾಡುವವರ ಬಾಯಿಗೂ ಬೀಗ ಬೀಳಲಿದೆ. ಬ್ಯಾಲಹಳ್ಳಿ ಗೋವಿಂದಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ