ಕೆ.ಆರ್.ನಗರ: ತಾಲೂಕಿನ ಗಳಿಗೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಅಮಿತ್ ವಿ.ದೇವರಹಟ್ಟಿ ಹಾಗೂ ಉಪಾಧ್ಯಕ್ಷರಾಗಿ ಎಂ.ಜಿ.ಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಆಡಳಿತ ಕಚೇರಿಯಲ್ಲಿ ಮಂಗಳವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಈ ಇಬ್ಬರನ್ನು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಅವಿನಾಶ್ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷ ಅಮಿತ್ ವಿ.ದೇವರಹಟ್ಟಿ ಮಾತನಾಡಿ, ಸಂಘ ಸ್ಥಾಪನೆಯಾಗಿ 109 ವರ್ಷಗಳಾಗಿದ್ದು, ಸಂಘದ ಶತಮಾನೋತ್ಸವ ಭವನ ನಿರ್ಮಿಸಲಾಗಿದೆ. ಬಾಕಿ ಉಳಿದಿರುವ ಸಣ್ಣಪುಟ್ಟ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟಿಸಲು ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಂಘದ ರೈತ ಸದಸ್ಯರಿಗೆ ಹೆಚ್ಚು ಸಾಲ ಸೌಲಭ್ಯ ನೀಡಲು ನಿರ್ಧರಿಸಲಾಗಿದ್ದು, ಈ ತಿಂಗಳ ಕೊನೆಯಲ್ಲಿ ನಡೆಯುವ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗುವುದು ಎಂದು ಹೇಳಿದರು. ಸಂಘದ ಸಿಇಒ ಪುಟ್ಟೇಗೌಡ, ತಾಪಂ ಮಾಜಿ ಅಧ್ಯಕ್ಷ ನಾಗಣ್ಣ, ಅಡಗೂರು ಗ್ರಾಪಂ ಅಧ್ಯಕ್ಷ ಮಹದೇವ್, ಮುಖಂಡರಾದ ಡಿ.ಕೆ.ಜಾಣೇಗೌಡ, ರಾಮಕೃಷ್ಣೇಗೌಡ, ಮಲ್ಲೇಶ್‌ಮೂರ್ತಿ, ರಾಜೇಗೌಡ, ಮಧುಕಿರಣ್, ಎಂ.ಎಸ್.ಮಹದೇವ್, ಸುಜೇಂದ್ರ, ರಾಜಮ್ಮ, ವೇದಾವತಿ, ಕೆ.ಸಿ.ಪ್ರಕಾಶ್, ಎ.ಎಂ.ತಮ್ಮಣ್ಣ, ಸಂಪತ್‌ಕುಮಾರ್, ಗೋವಿಂದೇಗೌಡ, ಬಸವರಾಜು, ರಾಹುಲ್, ಮರಿಗೌಡ, ಯೋಗೀಶ್, ಕುಮಾರ್ ಮತ್ತಿತರರು ಹಾಜರಿದ್ದರು.