ಕಳಸ: ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2022-23ನೇ ಸಾಲಿನಲ್ಲಿ 460.09 ಕೋಟಿ ರೂ. ವ್ಯವಹಾರ ನಡೆಸಿ 32.33 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಮಹಬಲೇಶ್ವರ ಮಾಹಿತಿ ನೀಡಿದರು.
ಸಂಘದ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ಪ್ರಸ್ತುತ 3,652 ಸದಸ್ಯರಿದ್ದು ಅತ್ಯುತ್ತಮ ಸಾಧನೆಯಿಂದಾಗಿ ಸಂಘವು ಈ ಸಾಲಿನಲ್ಲೂ ಎ ದರ್ಜೆ ಪಡೆದಿದೆ ಎಂದರು.
ಸಂಘದ ಸದಸ್ಯರ ಷೇರು ಬಂಡವಾಳ 128.63 ಲಕ್ಷ ರೂ. ಇದ್ದು ಆಪತ್‌ಧನ 104.95 ಲಕ್ಷ ರೂ. ಮತ್ತು ಇತರೆ ನಿಧಿಗಳು 517.93 ಲಕ್ಷ ರೂ. ಇದೆ. ಸಂಘದಲ್ಲಿ ಉಳಿತಾಯ ಠೇವಣಿ, ಆರ್.ಡಿ. ಠೇವಣಿ, ಪಿಗ್ಮಿ ಠೇವಣಿ ಮತ್ತು ಅನ್ನಪೂರ್ಣ ನಗದು ಪತ್ರದ ಮುಖಾಂತರ ಒಟ್ಟು 4872.78 ಲಕ್ಷ ರೂ. ಠೇವಣಿ ಹೊಂದಿರುತ್ತದೆ ಎಂದು ತಿಳಿಸಿದರು.
ಬೆಳೆಗಾರ ಕೆ.ಸಿ.ಧರಣೇಂದ್ರ ಮಾತನಾಡಿ, ಶ್ರಮವಹಿಸಿ ಅಡಕೆ ಸಂಸ್ಕರಣೆ ಮಾಡುವುದನ್ನು ರೈತರು ಬಿಟ್ಟಿರುವುದರಿಂದ ನಮ್ಮ ಹೆಚ್ಚಿನ ಲಾಭಾಂಶ ದಲ್ಲಾಳಿಗಳ ಪಾಲಾಗುತ್ತಿದೆ. ಅಡಕೆ ಸಂಸ್ಕರಣೆ ಮಾಡದಿದ್ರೆ ನಾವು ರೈತರಾಗಲು ಸಾಧ್ಯವಿಲ್ಲ. ಕಳಸ ಸಹಕಾರ ಸಂಘ ಕಾಫಿ ರ್ತು ಮಾಡುವ ಮಟ್ಟಕ್ಕೆ ಬೆಳೆಯಬೇಕು ಎಂದು ಹೇಳಿದರು.
ಪಿಯುಸಿ ಮತ್ತು 10ನೇ ತರಗತಿಯ ಪ್ರತಿಭಾನ್ವಿತ 25 ವಿದ್ಯಾರ್ಥಿಗಳಿಗೆ ತಲಾ 3 ಸಾವಿರ ರೂ. ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ, ಉಪಾಧ್ಯಕ್ಷೆ ಆಶಾಲತಾ ಜೈನ್, ನಿರ್ದೇಶಕರಾದ ಅ.ರಾ.ಸತೀಶ್ಚಂದ್ರ, ರವಿಕುಮಾರ್, ಅನಿಲ್ ಗೆವೀನ್, ಎಚ್.ಎಸ್.ಶ್ರೀಪಾಲಯ್ಯ, ರಾಜೇಂದ್ರ, ಎಚ್.ಟಿ.ಕೃಷ್ಣಪ್ಪ, ಕೃಷ್ಣಪ್ಪ, ಕೆ.ಕೃಷ್ಣ, ಅನುಸೂಯ ಇತರರಿದ್ದರು.