ನ್ಯೂಸ್

ಸರ್ವರ್ ಸಮಸ್ಯೆ ನೀಗಿಸಲು ಕ್ರಮಕ್ಕೆ ಮುಂದಾದ ಸರ್ಕಾರ: ಸುರಕ್ಷತೆಗೂ ಆದ್ಯತೆ ನೀಡಲು ಸೂಚನೆ

ಬೆಂಗಳೂರು:

ಕಂದಾಯ ಇಲಾಖೆಯಲ್ಲಿ ಡಿಜಿಟಲೀಕರಣ ಮೂಲಕ ಆಧುನೀಕರಣ ಹೆಚ್ಚುತ್ತಿರುವ ಬೆನ್ನಲ್ಲಿಯೇ ಸರ್ವರ್ ಸಮಸ್ಯೆಯೂ ಕಾಡತೊಡಗಿದೆ.

ಯಾವುದೇ ಒತ್ತಡಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಸರ್ವರ್‌ಗಳು ಕೆಲಸ ಮಾಡುವಂತ ವ್ಯವಸ್ಥೆ ಆಗಬೇಕು. ಆರ್ಟಿಫಿಷಿಯಲ್ ಇಂಟಲ್‌ಜೆನ್ಸಿ ಮೂಲಕ ಹ್ಯಾಕ್ ಮಾಡುವ ಪ್ರಯತ್ನಗಳನ್ನು ವಿಲಗೊಳಿಸಬೇಕು. ನಮ್ಮ ತಂತ್ರಾಂಶಗಳು ಎಲ್ಲವೂ ಭದ್ರವಾಗಿರಬೇಕು. ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಬೇಕು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.

ನೋಂದಣಿ ಇಲಾಖೆಯಲ್ಲಿಯೂ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಸಾರ್ವಜನಿಕವಾಗಿ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಸದಾ ಸರ್ವರ್ ಸಮಸ್ಯೆ, ನೆಟ್‌ವರ್ಕ್ ಸಮಸ್ಯೆ ಮಾತ್ರ ಬಾಧಿಸುತ್ತಲೇ ಇದೆ. ಆ ಕಾರಣಕ್ಕಾಗಿ ಇದನ್ನು ನಿವಾರಣೆ ಮಾಡಲು ಆದ್ಯತೆ ಮೇಲೆ ಮಾರ್ಗೋಪಾಯಗಳ ಬಗ್ಗೆ ಈಗಿನಿಂದಲೇ ಕ್ರಮ ಜರುಗಿಸಬೇಕು ಎಂದು ಸಚಿವರು ಸಲಹೆ ನೀಡಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲಿಯೇ ಇ ಆಡಳಿತ ಇಲಾಖೆ ಜೊತೆಗೆ ನಿರಂತರ ಸಭೆಗಳನ್ನು ನಡೆಸಲಾಗಿದೆ. ಶೀಘ್ರವೇ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಹಿರಿಯ ಅಧಿಕಾರಿಗಳು ವಿಶ್ವಾಸದಲ್ಲಿದ್ದಾರೆ.

ಭೂ ದಾಖಲೆಗಳನ್ನು ಕಾವೇರಿ ಸ್‌ಟಾವೇರ್ ಮೂಲಕ ಡಿಜಿಟಲೀಕರಣ ಮಾಡಿದ ಬಳಿಕ ಪಹಣಿಗಳನ್ನು ಕಂಪ್ಯೂಟರ್‌ನಲ್ಲಿಯೇ ಪಡೆದುಕೊಳ್ಳಲು ಸಾಧ್ಯವಾಗಿದ್ದು, ರೈತರ ಪರದಾಟ ತಪ್ಪಿದೆ ಎನ್ನುವುದು ಬಹಳ ದೊಡ್ಡ ಸಂಗತಿಯಾಗಿತ್ತು. ಈಗ ಅದರಾಚೆಗೂ ಎಲ್ಲವೂ ಡಿಜಿಟಲೀಕರಣ ಮಾಡಲು ಸರ್ಕಾರ ಮುಂದಾಗಿರುವುದು ಹೊಸ ಸವಾಲುಗಳನ್ನು ತಂದೊಡ್ಡಿದೆ. ಆದುದರಿಂದಲೇ

ಸರ್ವರ್ ವ್ಯವಸ್ಥೆ ಬಲವರ್ಧನೆ ಮಾಡಲು ಸರ್ಕಾರ ಮುಂದಡಿ ಇಟ್ಟಿದೆ. ಅಷ್ಟೇ ಅಲ್ಲ, ಗ್ರಾಮೀಣ ಪ್ರದೇಶದಲ್ಲಿ ಸರ್ವರ್ ಸಮಸ್ಯೆ ನಿವಾರಣೆಗೂ ಮುಂದಾಗಿದೆ.

*ಗ್ರಾಮೀಣ ಪ್ರದೇಶದಲ್ಲಿ ಸರ್ವರ್ ಮತ್ತು ನೆಟ್‌ವರ್ಕ್ ಸಮಸ್ಯೆಗಳೆರಡೂ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ.

-ಕೃಷ್ಣಭೈರೇಗೌಡ, ಕಂದಾಯ ಸಚಿವರು