ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯಕ್ಕೆ ಸಂಪ್ರದಾಯದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವ ಹಾಗೂ ಡಿಸಿಎಂ ಡಿಕೆಶಿವಕುಮಾರ ಗಂಗಾಪೂಜೆ ನೇರವೇರಿಸಿ ಜಲದಿಗೆ ಬಾಗಿನ ಅರ್ಪಿಸಿದರು. ನಂತರ ಸುದ್ದಿಗಾರರೊಂದಿಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದರು. 
ನ್ಯೂಸ್

ಶೀಘ್ರ ಸರ್ವಪಕ್ಷಗಳ ನಿಯೋಗ ದೆಹಲಿಗೆ

ವಿಜಯಪುರ
ರಾಜ್ಯದ ಕಾವೇರಿ ಜಲವಿವಾದ ಇತ್ಯರ್ಥಗೊಳಿಸಲು ಶೀಘ್ರ ದೆಹಲಿಗೆ ಸರ್ವಪಕ್ಷಗಳ ನಿಯೋಗ ಕರೆದುಕೊಂಡು ಹೋಗಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಒತ್ತಡ ಹೇರಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು.

ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯಕ್ಕೆ ಸಂಪ್ರದಾಯದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವ ಹಾಗೂ ಡಿಸಿಎಂ ಡಿಕೆಶಿವಕುಮಾರ ಗಂಗಾಪೂಜೆ ನೇರವೇರಿಸಿ ಜಲದಿಗೆ ಬಾಗಿನ ಅರ್ಪಿಸಿದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಾವೇರಿ ನದಿ ವಿವಾದ ಬಗ್ಗೆ ಪ್ರಧಾನಿಗಳೊಂದಿಗೆ ಚರ್ಚೆ ನಡೆಸಲು ಈಗಾಗಲೇ ಪ್ರಧಾನಿ ಕಚೇರಿಗೆ ಪತ್ರ ಬರೆಯಲಾಗಿದೆ. ಅವರು ಯಾವಾಗ ಕಾಲಾವಕಾಶ ನೀಡುತ್ತಾರೆ ಎನ್ನುವುದು ನೋಡಿಕೊಂಡು ಸರ್ವಪಕ್ಷಗಳ ನಿಯೋಗ ಕರೆದುಕೊಂಡು ಹೋಗಿ ಪ್ರಧಾನಿ ಮೇಲೆ ಒತ್ತಡ ಹೇರಲಾಗುವುದು ಎಂದರು.

ಈಗಾಗಲೇ ರಾಜ್ಯ ಜಲಸಂಪನ್ಮೂಲ ಸಚಿವರು ನಮ್ಮ ರಾಜ್ಯದ ಪರವಾಗಿ ವಾದ ಮಂಡಿಸುವ ವಕೀಲರನ್ನು ಭೇಟಿ ಮಾಡಿ ಅವರಿಗೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಬುಧವಾರ ಪ್ರಕರಣ ವಿಚಾರಣೆಗೆ ಬರಲಿದ್ದು ನಮ್ಮ ವಾದ ಏನಿರಬೇಕು ಎಂದು ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಬರಪೀಡಿತ ಘೋಷಣೆ: ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ, ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿರುವ ಸಚಿವ ಸಂಪುಟ ಉಪ ಸಮಿತಿಯಿಂದ ಜಂಟಿ ಸಮೀಕ್ಷೆ ನಡೆಸಲಾಗುತ್ತಿದ್ದು ಸೆ.4 ರಂದು ನಡೆಯುವ ಸಭೆಯಲ್ಲಿ ಬರಗಾಲ ಘೋಷಣೆ ಕುರಿತು ತೀರ್ಮಾನಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ಶೇ.56 ರಷ್ಟು ಮಳೆಯಾಗಿದೆ. ಈಗಾಗಲೇ ರಾಜ್ಯದ ಬರ ಪೀಡಿತ 113 ತಾಲೂಕುಗಳ ಕುರಿತು ಸಮಿತಿ ಸಮೀಕ್ಷೆ ನಡೆಸುತ್ತಿದ್ದು, ಮತ್ತೆ 73 ತಾಲೂಕುಗಳ ಜಂಟಿ ಸಮೀಕ್ಷೆ ವರದಿಯಾಧರಿಸಿ ಯಾವ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಿಸುವ ಕುರಿತು ಸೆ.4 ರಂದು ನಡೆಯುವ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.

ಬರ ಘೋಷಣೆಯ ನಂತರ ಕೇಂದ್ರಸರ್ಕಾರಕ್ಕೆ ಬರಪೀಡಿತ ತಾಲ್ಲೂಕುಗಳಿಗೆ ನೆರವು ಕೋರಿ ಮನವಿ ಸಲ್ಲಿಸಲಾಗುವುದು. ಕೇಂದ್ರ ಸರ್ಕಾರದ ಸಮಿತಿಯು ಸಮೀಕ್ಷೆ ನಡೆಸಿದ ನಂತರ , ಎನ್ ಡಿ ಆರ್ ಎಫ್ ಮಾರ್ಗಸೂಚಿಯಂತೆ ಹಣ ಬಿಡುಗಡೆ ಮಾಡಲಿದೆ. ರಾಜ್ಯಸರ್ಕಾರ ಈ ಅನುದಾನದಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲಿದೆ ಎಂದರು.

ಅದಲ್ಲದೇ ರಾಜ್ಯ ಸರ್ಕಾರವೂ ಪರಿಹಾರ ಕಾರ್ಯಗಳಿಗೆ ಹಣ ವಿನಿಯೋಗಿಸಲಿದೆ. 2020 ರಿಂದ ಇಲ್ಲಿಯವರೆಗೆ ಪರಿಷ್ಕರಣೆ ಆಗಿಲ್ಲ. ಎನ್‌ಡಿಆರ್‌ಎಫ್ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಲು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಎನ್‌ಡಿಆರ್‌ಎಫ್ ನಿಯಮಾವಳಿಗಳು ತೊಡಕಾಗಿದ್ದು, ರೈತರಿಗೆ ಇನ್ನಷ್ಟೂ ಅನುಕೂಲತೆ ತರುವ ದೃಷ್ಟಿಯಿಂದ ನಿಯಮಾವಳಿಗಳ ಬದಲಾವಣೆ ಮಾಡುವಂತೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕೋರಲಾಗಿ ಎಂದು ಹೇಳಿದರು.
ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಎಂ, ಕಾವೇರಿ ವಿಚಾರದಲ್ಲಿ ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ. ರಾಜ್ಯದ ಹಿತ ಕಾಪಾಡುವುದೇ ನಮ್ಮ ಸರ್ಕಾರದ ಪ್ರಥಮಾದ್ಯತೆಯಾಗಿದೆ.. ಎಷ್ಟೇ ತೊಡಕುಗಳಿದ್ದರೂ ಸಹ ಕುಡಿಯುವ ನೀರಿನ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು. ಸಮರ್ಥವಾಗಿ ವಾದ ಮಂಡಿಸಿ ರಾಜ್ಯದ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ, ಯಾವುದೇ ಹಣಕಾಸಿನ ತೊಂದರೆ ಇಲ್ಲ ಎಂದು ಹೇಳಿದರು.