ಶೃಂಗೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿ ದೃಣ್ಯ ಶೆಟ್ಟಿ ಅವರನ್ನು ಪುರಸ್ಕರಿಸಲಾಯಿತು. ವರಲಕ್ಷ್ಮೀ, ಪ್ರವೀಣ್ ಪೂಜಾರಿ, ಶ್ರೀಶ, ಉಷಾ, ಪದ್ಮಾವತಿ ಇತರರಿದ್ದರು. 
ನ್ಯೂಸ್

ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ

ಶೃಂಗೇರಿ: ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಮಾತ್ರವಲ್ಲದೆ ಬೇರೆ ಕ್ಷೇತ್ರದಲ್ಲೂ ಉದ್ಯೋಗಕ್ಕೆ ವಿಪುಲವಾದ ಅವಕಾಶವಿದ್ದು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಜೆಸಿಬಿಎಂ ಕಾಲೇಜಿನ ಪ್ರಾಚಾರ್ಯ ಡಾ. ಸ್ವಾಮಿ ಹೇಳಿದರು.

ವಿದ್ಯಾನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಮತ್ತು ಹಳೇ ವಿದ್ಯಾರ್ಥಿ ಸಂಘದಿಂದ ಮಂಗಳವಾರ ಪ್ರೌಢಶಾಲಾ ವಿಭಾಗದ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಹುತೇಕ ಪಾಲಕರು ಮಕ್ಕಳು ಇಂಜಿನಿಯರ್, ವೈದ್ಯ ಶಿಕ್ಷಣವನ್ನು ಬಯಸುತ್ತಿದ್ದಾರೆ. ಇದನ್ನು ಹೊರತುಪಡಿಸಿ ಬೇರೆ ವೃತ್ತಿಯಲ್ಲೂ ಉತ್ತಮ ಸಾಧನೆ ಮಾಡಬಹುದು ಎಂಬುದನ್ನು ಪಾಲಕರು ಅರಿಯಬೇಕು. ಯಾವುದೇ ವೃತ್ತಿಯನ್ನು ಪ್ರಾಮಾಣಿಕವಾಗಿ ಮಾಡಬೇಕು. ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು ನುರಿತ ತರಬೇತಿ ಹೊಂದಿದ ಶಿಕ್ಷಕರು ಸರ್ಕಾರಿ ಶಾಲೆಯಲ್ಲಿದ್ದಾರೆ ಎಂದರು.

ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ನಿರಂಜನಕುಮಾರ್ ಮಾತನಾಡಿ, 2022-23ನೇ ಸಾಲಿನಲ್ಲಿ ಅಮೃತ ಮಹೋತ್ಸವ ಆಚರಿಸಿಕೊಂಡ ಶಾಲೆಯ ಹಳೇ ವಿದ್ಯಾರ್ಥಿ ಸಂಘ ಒಟ್ಟುಗೂಡಿಸಿದ ಹಣವನ್ನು ಠೇವಣಿಯಾಗಿರಿಸಿ ಅದರ ಬಡ್ಡಿ ಹಣದಿಂದ ಪ್ರತಿವರ್ಷ ಪ್ರತಿಭಾ ಪುರಸ್ಕಾರ ನಡೆಸಲಾಗುತ್ತಿದೆ. ಶಾಲೆಯ ಹಳೇ ವಿದ್ಯಾರ್ಥಿಗಳು ಸಂಘಕ್ಕೆ ದೇಣಿಗೆ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎಂದರು. ತಾಲೂಕಿಗೆ ಪ್ರಥಮ ಸ್ಥಾನ ಪಡೆದ ದೃಣ್ಯ ಶೆಟ್ಟಿ ಸಹಿತ ಹೆಚ್ಚು ಅಂಕ ಗಳಿಸಿದ 28 ವಿದ್ಯಾರ್ಥಿಗಳಿಗೆ ವಿವಿಧ ದತ್ತಿ ನಿಧಿ, ಹಳೇ ವಿದ್ಯಾರ್ಥಿ ಸಂಘದಿಂದ 10 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಕಲ್ಕಟ್ಟೆ ಆನಂದಸ್ವಾಮಿ, ಉಪ ಪ್ರಾಚಾರ್ಯ ಶಶಿಧರ್, ಪ್ರಕಾಶ್, ರಾಜೇಶ್, ಉಷಾ, ಪದ್ಮಾವತಿ, ಅಭಿರಾಂ, ಬಿಇಒ ವರಲಕ್ಷ್ಮೀ, ಪ್ರವೀಣ ಪೂಜಾರಿ, ವೆಂಕಟೇಶಮೂರ್ತಿ, ಶ್ರೀಶ ಇತರರಿದ್ದರು.