ಕೆ.ಆರ್.ನಗರ: ತಾಲೂಕಿನ ಚಂದಗಾಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಗ್ರಾಮದಲ್ಲಿ ಶನಿವಾರ ಶಾಲಾ ದಾಖಲಾತಿ ಆಂದೋಲನ ಅಭಿಯಾನ ನಡೆಯಿತು.
ಜಾಥಾಗೆ ಚಾಲನೆ ನೀಡಿ ಮಾತನಾಡಿದ ಎಸ್‌ಡಿಎಂಸಿ ಅಧ್ಯಕ್ಷ ಸಿ.ಜಿ.ಮಂಜುನಾಥ್, ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಆದ್ದರಿಂದ ಪಾಲಕರು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಾತಿ ಮಾಡಬೇಕು ಎಂದು ಕೋರಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸರ್ಕಾರಿ ಶಾಲೆಗಳ ಮಕ್ಕಳಿಗೆ ಶೂ ಭಾಗ್ಯ, ಕ್ಷೀರಭಾಗ್ಯ, ಸೇರಿದಂತೆ ಹಲವು ಸವಲತ್ತುಗಳನ್ನು ನೀಡುತ್ತಿರುವುದರ ಜತೆಗೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಇದನ್ನು ಪಾಲಕರು ಅರ್ಥ ಮಾಡಿಕೊಂಡು ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಾತಿ ಮಾಡುವ ಮೂಲಕ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಮುಖ್ಯಶಿಕ್ಷಕ ತಿಮ್ಮೇಗೌಡ, ಶಿಕ್ಷಕರಾದ ಧನಂಜಯ್, ಮಂಜುನಾಥ್, ಬಿ.ಆರ್.ಮನು, ಲಕ್ಷ್ಮಮ್ಮ, ಸುಕನ್ಯಾ, ನಾಗಶ್ರೀ, ಮೇಘನಾ ಹಾಜರಿದ್ದರು.