ಭಾಲ್ಕಿ: ಸರ್ಕಾರಿ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚಿಸಲು ಗಮನ ಹರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ೨೦೨೫-೨೬ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವುದು ಅತ್ಯಗತ್ಯವಾಗಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಸಾಕಷ್ಟು ಸೌಲಭ್ಯಗಳಿವೆ, ಆದರೆ ಆ ಸೌಲಭ್ಯಗಳ ಮಾಹಿತಿ ಪಾಲಕರಲ್ಲಿ ಮೂಡಿಸುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಹೀಗಾಗಿ ಪ್ರಸ್ತುತ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಅತಿಹೆಚ್ಚು ದಾಖಲಾಗುವಂತೆ ನೋಡಿಕೊಳ್ಳುವುದು, ಶಿಕ್ಷಕರ, ಪಾಲಕರ ಮತ್ತು ಶಾಲಾ ಮೇಲುಸ್ತುವಾರಿ ಸದಸ್ಯರ ಜವಾಬ್ದಾರಿಯಾಗಿದೆ. ಅಲ್ಲದೇ ದಾಖಲಾದ ಮಕ್ಕಳನ್ನು ಶಾಲೆಗೆ ಪ್ರತಿನಿತ್ಯ ಹಾಜರಾಗುವಂತೆ ಮಾಡುವುದು. ಸರ್ಕಾರದಿಂದ ಕೊಡಲಾಗುವ ಸೌಲಭ್ಯಗಳು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನಗಳು ವಿದ್ಯಾರ್ಥಿಗಳಿಗೆ ಸರಿಯಾಗಿ ಮುಟ್ಟುತ್ತಿರುವ ಬಗ್ಗೆ ಮಾಹಿತಿ ಪಡೆದು ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೊಳಕರ ಮಾತನಾಡಿ, ನಮ್ಮ ಸಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮವು ರಾಜ್ಯದ ೩೫ ಜಿಲ್ಲೆಗಳ ೫೩೮೧೦ ಶಾಲೆಗಳಲ್ಲಿ ಅಯೋಜಿಸಿದ್ದು, ಇದರ ಯಶಸ್ಸು ಸಮುದಾಯದ ಪಾಲ್ಗೊಳ್ಳುವಿಕೆಯ ಮುಖಾಂತರ ಸರ್ಕಾರದ ಯೋಜನೆಗಳು ಜನರಿಗೆ ಮುಟ್ಟಿಸುವುದಾಗಿದೆ ಎಂದು ಹೇಳಿದರು.
ಅಜೀಮ್ ಪ್ರೇಮಜಿ ಫೌಂಡೇಷನ್ ಮುಖ್ಯಸ್ಥ ಸಿದ್ರಾಮ ತೊಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮಲ್ಲಿನಾಥ ಸಜ್ಜನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ವೈದ್ಯೆ ಡಾ.ಸುಪ್ರಿಯಾ ಪಾಟೀಲ ವಿದ್ಯಾರ್ಥಿಗಳಲ್ಲಿ ಆರೋಗ್ಯದ ಅರಿವು ಮೂಡಿಸಿದರು.
ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದತ್ತು ಕಾಟಕರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಸುಂಟೆ, ಪ್ರಾಚಾರ್ಯ ಸುಖದೇವ ಬಿರಾದಾರ, ಇಸಿಒ ಸಹದೇವ.ಜಿ, ಗಂಗಾಧರ, ಬಿಆರ್‌ಪಿ ಚೇತನಾ ಚನಶೆಟ್ಟಿ, ಸಿಆರ್‌ಪಿ ಅಂಬ್ರೀಶ ಖಂಡ್ರೆ, ಭುವನೇಶ್ವರ ಬಿರಾದಾರ, ಮಹೇಂದ್ರ ಮಾನಕರಿ, ಸಂದೀಪ, ನೀಲಕಂಠ ಕುರಣಿ, ಮಹಾದೇವ ವಾಂಜರಖೇಡ, ರಾಜಕುಮಾರ ಘಂಟೆ, ಸಂತೋಷ ಸ್ವಾಮಿ, ಚನ್ನಬಸಪ್ಪಾ ತಳವಾಡೆ, ಮಹೇಶ ಕೊರಾಳೆ, ಸಂತೋಷ ಧಬಾಲೆ ಇತರರಿದ್ದರು.
ಸಹದೇವ ಗೌಡಗಾವೆ ಸ್ವಾಗತಿಸಿದರು. ಚೇತನಾ ಸಂತೋಷಕುಮಾರ ನಿರೂಪಣೆ ಮಾಡಿದರು. ಚನ್ನಪ್ಪ ವಂದಿಸಿದರು. ಜಿಲ್ಲಾ ಮಟ್ಟದಲ್ಲಿ ಅತೀ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.