ಸಾಗರ: ಸರ್ಕಾರಿ ಶಾಲೆಗಳ ಶ್ರೇಯೋಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಹಳೆಯ ವಿದ್ಯಾರ್ಥಿಗಳು ತಮ್ಮ ವ್ಯಾಪ್ತಿಯ ಶಾಲೆಗಳನ್ನು ಸುಸ್ಥಿತಿಯಲ್ಲಿಡಲು ಸಹಕಾರ ನೀಡಬೇಕು ಎಂದು ಬಿಇಒ ಈ.ಪರಶುರಾಮಪ್ಪ ತಿಳಿಸಿದರು.
ತಾಲೂಕಿನ ಬ್ಯಾಕೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ದಾನಿ ಅನುಪಮಾ ಲಕ್ಷ್ಮೀನಾರಾಯಣ್ ವಿವಿಧ ಶಾಲೆಗೆ ನೀಡಿರುವ ಸುಮಾರು 3 ಲಕ್ಷ ರೂ. ಮೌಲ್ಯದ ಸ್ಮಾರ್ಟ್ ಟಿವಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅನುಪಮಾ ಲಕ್ಷ್ಮೀನಾರಾಯಣ ಅವರ ಶೈಕ್ಷಣಿಕ ಕಾಳಜಿ ಅನುಕರಣೀಯವಾದುದು. ನನ್ನ ಶಾಲೆ ನನ್ನ ಜವಾಬ್ದಾರಿ ಯೋಜನೆ ಅಡಿ ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಟಿವಿ ನೀಡುವ ಮೂಲಕ ಮಕ್ಕಳ ಕಲಿಕೆಗೆ ನೆರವಾಗಿದ್ದಾರೆ. ಸುಮಾರು 8 ಶಾಲೆಗಳಿಗೆ ಇವರು ಸ್ಮಾರ್ಟ್ ಟಿವಿಯನ್ನು ನೀಡಿದ್ದಾರೆ. ಸರ್ಕಾರಿ ಶಾಲೆಗಳು ಮಾದರಿ ಶಾಲೆಯಾಗಿ ರೂಪುಗೊಳ್ಳಬೇಕಾದರೆ ಎಲ್ಲರ ಸಹಕಾರ ಅಗತ್ಯ ಎಂದರು.
ಸಮನ್ವಯ ಕೇಂದ್ರದ ಸಿಆರ್‌ಪಿ ಚಂದ್ರಪ್ಪ ಅಳೂರು ಮಾತನಾಡಿ, ಸರ್ಕಾರಿ ಶಾಲೆಗಳ ಶ್ರೇಯೋಭಿವೃದ್ಧಿಗೆ ಅನುಪಮಾ ಲಕ್ಷ್ಮೀನಾರಾಯಣ ಅವರ ಕೊಡುಗೆ ಗಮನಾರ್ಹವಾದದ್ದು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗಲಿ ಎಂದು ಸ್ಮಾರ್ಟ್ ಟಿ.ವಿ. ನೀಡಿದ್ದಾರೆ. ಹಿಂದೆ ಬೆಳಲಮಕ್ಕಿ ಶಾಸಕರ ಮಾದರಿ ಶಾಲೆಗೆ ವಿವಿಧ ಸೌಲಭ್ಯ ನೀಡುವ ಜತೆಗೆ ಸರಸ್ವತಿ ವಿಗ್ರಹ ಮಾಡಿಸಿಕೊಟ್ಟಿದ್ದಾರೆ. ಕೆರೆ ಶಾಲೆ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಬಾಬು, ಸತೀಶ್ ಶೆಟ್ಟಿ, ಪ್ರಸಾದ್, ವನಜಾಕ್ಷಿ, ಪ್ರಸನ್ನ ಕುಮಾರ್, ಶೀಲಾ, ರಾಧಿಕಾ, ಮೂಕಪ್ಪ, ದಿನೇಶ್ ಇತರರಿದ್ದರು.