ಎನ್.ಆರ್.ಪುರ: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಸರ್ಕಾರ ಖಾಸಗಿ ಸಂಘ, ಸಂಸ್ಥೆಗಳೊಂದಿಗೆ ಕೈಜೋಡಿಸಿ ಮೂಲ ಸೌಕರ್ಯ ಒದಗಿಸಿದರೆ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯ ಎಂದು ಕ್ಯೂಲರ್ ಟೆಕ್ನಾಲಜಿ ಇಂಡಿಯಾ ಕಂಪನಿ ಮುಖ್ಯಸ್ಥ ಕೆ.ಬಿ.ಲಕ್ಷ್ಮೀನಾರಾಯಣ ಹೇಳಿದರು.
ಮುತ್ತಿನಕೊಪ್ಪ ಗ್ರಾಪಂ ವ್ಯಾಪ್ತಿಯ ಕುಸುಬೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಯೂಲರ್ ಟೆಕ್ನಾಲಜಿ ಇಂಡಿಯಾ ಕಂಪನಿ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ ನಿರ್ಮಿಸಿದ ಶೌಚಗೃಹ, ಕುಡಿಯುವ ನೀರಿನ ಘಟಕ ಹಾಗೂ ರಂಗಮಂದಿರ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಎಲ್ಲ ಸರ್ಕಾರಿ ಶಾಲೆಗಳಿಗೂ ಮೂಲ ಸೌಕರ್ಯ ದೊರೆಯುವಂತಾಗಬೇಕು. ಸರ್ಕಾರಿ ಶಾಲೆಗಳಲ್ಲಿ ಓದುವವರ ಸಂಖ್ಯೆ ಹೆಚ್ಚುವಂತೆ ಮಾಡಬೇಕು. ನಮ್ಮ ಸಂಸ್ಕೃತಿಯಲ್ಲಿ ವಿದ್ಯಾರ್ಥಿಗಳನ್ನು ಬೆಳೆಸಬೇಕು ಎಂದರು.
ತುಮಕೂರು ನೆವಿಲ್ ಫೌಂಡೇಶನ್‌ನ ಕೆ.ಚಂದ್ರಶೇಖರಯ್ಯ ಮಾತನಾಡಿ, ಕಂಪನಿಯ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಪೋಲಾಗಬಾರದೆಂಬ ಉದ್ದೇಶದಿಂದ ಸಂಘ, ಸಂಸ್ಥೆಗಳ ಸಹಕಾರ ಪಡೆದು ಸಮುದಾಯಕ್ಕೆ ಕೊಡುಗೆ ನೀಡಲಾಗಿದೆ ಎಂದು ತಿಳಿಸಿದರು.
ಹಳೇ ವಿದ್ಯಾರ್ಥಿ ಸಂಘದ ಕೆ.ಮಂಜುನಾಥ್ ಮಾತನಾಡಿ, ಶಿಕ್ಷಣದಿಂದ ಮಾತ್ರ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲು ಸಾಧ್ಯ. ವಿದ್ಯೆ ಯಾರೂ ಕದಿಯಲಾಗದ ಸಂಪತ್ತಾಗಿದೆ ಎಂದರು.
ಬೆಂಗಳೂರು ಕ್ಯೂಲರ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಶಶಿಶೇಖರ್ ರೆಡ್ಡಿ ಮಾತನಾಡಿ, ಕಂಪನಿಯಿಂದ ಒದಗಿಸಲಾದ ಮೂಲ ಸೌಕರ್ಯಗಳನ್ನು ಬಳಸಿಕೊಂಡು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಹೆಚ್ಚು ಅಭಿವೃದ್ಧಿಯಾಗಬೇಕು ಎಂದು ಸಲಹೆ ನೀಡಿದರು.
ಬಿಇಒ ಕೆ.ಆರ್.ಪುಷ್ಪಾ, ಕ್ಯೂಲರ್ ಕಂಪನಿಯ ಶಶಿಕುಮಾರ್ ಉಡುಪ, ಮುತ್ತಿನಕೊಪ್ಪ ಗ್ರಾಪಂ ಸದಸ್ಯರಾದ ಬೆಳ್ಳಪ್ಪ, ಸುಧಾಕರ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಎಲ್.ಪ್ರವೀಣ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎನ್.ನಂದೀಶ್, ಕ್ಷೇತ್ರ ಸಮನ್ವಯಾಧಿಕಾರಿ ಸೇವ್ಯಾನಾಯ್ಕ, ಸಿಆರ್‌ಪಿ ಗೀತಾ, ಮುಖ್ಯಶಿಕ್ಷಕ ಹೇಮರಾಜ್, ಸಹಶಿಕ್ಷಕಿ ಹೇಮಾವತಿ, ಮಂಜುಳಾ ಇದ್ದರು.