ನ್ಯೂಸ್

ಸರ್ಕಾರಿ ಮಹಿಳಾ ಪದವಿ ಕಾಲೇಜಿಗಿಲ್ಲ ಸೂರು, ಮೂಲಸೌಕರ್ಯಗಳ ಕೊರತೆ, ಭೂಮಿ ಮಂಜೂರಿಗೆ ಸರ್ಕಾರದ ಮೀನಮೇಷ

ಪ್ರದೀಪ್ ಕುಮಾರ್ ಆರ್. ದೊಡ್ಡಬಳ್ಳಾಪುರ ಗ್ರಾಮಾಂತರ

ನಗರದ ತಾಲೂಕು ಕಚೇರಿ ರಸ್ತೆಯಲ್ಲಿರುವ ಸರ್ಕಾರಿ ಪ್ರೌಡಶಾಲೆಯ ಹಳೆಯ ಕಟ್ಟಡದಲ್ಲಿ 2014ರಲ್ಲಿ ಕಾರ್ಯಾರಂಭಿಸಿರುವ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು 7 ವರ್ಷ ಕಳೆದರೂ ಮೂಲಸೌಕರ್ಯ ಕೊರತೆಯಿಂದ ನಲುಗುತ್ತಿದೆ.

ಜಿಲ್ಲೆಯ ಏಕೈಕ ಪದವಿ ಮಹಿಳಾ ಕಾಲೇಜು ಎಂಬ ಹೆಗ್ಗಳಿಕೆಯ ಈ ಕಾಲೇಜು, ಬಿಎ ಹಾಗೂ ಬಿಕಾಂ ಕೋರ್ಸ್‌ಗಳಲ್ಲಿ 154 ವಿದ್ಯಾರ್ಥಿನಿಯರಿಂದ ಆರಂಭಗೊಂಡಿತ್ತು. ಪ್ರಸ್ತುತ 164 ವಿದ್ಯಾರ್ಥಿನಿಯರು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ನಿರ್ವಹಣೆಯಿಲ್ಲದ ಶೌಚಗೃಹ

ತರಗತಿ ಪಕ್ಕದಲ್ಲಿರುವ ಹಳೆಯ ಶೌಚಗೃಹವಿದೆ. ಆದರೆ, ಸಮರ್ಪಕ ನಿರ್ವಹಣೆ ಕೊರತೆಯಿಂದ ಅದು ಬಳಕೆಯೋಗ್ಯವಾಗಿಲ್ಲ. ಅಲ್ಲದೆ ಅದರಿಂದ ಹೊಮ್ಮುವ ದುರ್ವಾಸನೆ ತರಗತಿಗಳಿಗೂ ಹಬ್ಬಿದೆ. ಇದರಿಂದಾಗಿ ವಿದ್ಯಾರ್ಥಿನಿಯರು ಮೂಗುಮುಚ್ಚಿಕೊಂಡೇ ಪಾಠ ಕೇಳುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಮುರಿದ ಕಿಟಕಿ, ಬೆಂಚು

ಯಾವುದೇ ಕೊಠಡಿಗಳಿಗೂ ವಿದ್ಯುತ್ ಸಂಪರ್ಕ ಇಲ್ಲ. ಕಿಟಕಿ, ಬಾಗಿಲು, ಮುರಿದು ಹೋಗಿವೆ. ಕುಳಿತುಕೊಳ್ಳುವ ಬೆಂಚ್‌ಗಳು ಹಾಳಾಗಿದ್ದು, ಕನಿಷ್ಠ ಮಟ್ಟದ ಮೂಲಸೌಲಭ್ಯವೂ ಕಾಣೆಯಾಗಿದೆ. ಇಂಥ ಅವಸ್ಥೆಯಲ್ಲೇ ಪಾಠ ಕೇಳುವ ದೌರ್ಭಾಗ್ಯ ವಿದ್ಯಾರ್ಥಿನಿಯರದ್ದಾಗಿದೆ.

ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗ: ನಗರಸಭೆ ವ್ಯಾಪ್ತಿಯ ಹಳೇ ಸರ್ಕಾರಿ ಆಸ್ಪತ್ರೆ ಪಕ್ಕ 3 ಎಕರೆ ಗೋಮಾಳ, ಡಿವೈಎಸ್ಪಿ ಕಚೇರಿ ಪಕ್ಕ 10 ಎಕರೆ, ಮುತ್ಸಂದ್ರ ನಂದಿಮೋರಿ ಬಳಿ 5 ಎಕರೆ... ಹೀಗೆ ನಗರದಲ್ಲಿ ಅನೇಕ ಭಾಗದಲ್ಲಿ ಸರ್ಕಾರಿ ಜಾಗವಿದ್ದರೂ, ಅದರಲ್ಲಿ ಯಾವುದಾದರೂ ಒಂದು ಸ್ಥಳವನ್ನು ಗುರುತಿಸಿ, ಕಾಲೇಜಿಗೆ ಮಂಜೂರು ಮಾಡುವ ಗೋಜಿಗೆ ಸರ್ಕಾರ ಹೋಗದಿರುವುದು ಅಚ್ಚರಿಗೆ ಕಾರಣವಾಗಿದೆ.

ಈಗಾಗಲೇ ತಾಲೂಕು ಆಡಳಿತಕ್ಕೆ ತೋಟಗಾರಿಕೆ ಇಲಾಖೆಗೆ ಸೇರಿದ ಒಂದು ಎಕರೆ ಜಾಗ ಮಂಜೂರಾತಿಗೆ ಮನವಿ ಮಾಡಲಾಗಿದೆ. ಆದರೂ ಮಂಜೂರಾತಿ ನೀಡಲು ಅನಗತ್ಯ ವಿಳಂಬ ಮಾಡಲಾಗುತ್ತಿದೆ. ರಾಜಧಾನಿಗೆ ಹತ್ತಿರವಿದ್ದರೂ ರಾಜ್ಯದ ಮಂತ್ರಿಗಳು, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯದ ಪರಿಣಾಮ ಹಳೆಯ ಪಾಳು ಬಿದ್ದಿರುವ ಕೊಠಡಿಗಳಲ್ಲೇ ವಿದ್ಯಾರ್ಥಿನಿಯರು ಪಾಠ ಕೇಳುವಂತಾಗಿದೆ.

ತೋಟಗಾರಿಕೆ ಇಲಾಖೆಗೆ ಸೇರಿದ 2 ಎಕರೆ ಜಾಗ ಮಂಜೂರಾತಿಗೆ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈವರೆಗೂ ಆ ಜಾಗವನ್ನು ನಮಗೆ ಹಸ್ತಾಂತರಿಸಲು ಹಿಂದೇಟು ಹಾಕಲಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ನಮ್ಮ ತಾಲೂಕಿಗೆ ಯಾವುದೇ ಅನುದಾನ ನೀಡಿಲ್ಲ. ಜಾಗ ಕೊಟ್ಟರೆ ಮಾತ್ರ ಕಟ್ಟಡ ಕಟ್ಟಲು ಸಾದ್ಯ. ಟಿ. ವೆಂಕಟರಮಣಯ್ಯ, ಶಾಸಕ ಪ್ರೌಢಶಾಲೆಯ ಕಟ್ಟಡದಲ್ಲಿ ತರಗತಿಗಳು ನಡೆಸುತ್ತಿವೆ. ಕಟ್ಟಡ ಹಳೆಯದಾಗಿರುವ ವಿದ್ಯಾರ್ಥಿನಿಯರ ದಾಖಲಾತಿ ಪ್ರಮಾಣ ಕುಸಿದಿದೆ. ಜಾಗ ಮಂಜೂರಾತಿಗೆ ತಹಸೀಲ್ದಾರ್ ಅವರಿಗೆ ಮನವಿ ಮಾಡಲಾಗಿದೆ. ಅವರು ಮಂಜೂರಾತಿ ನೀಡಿದರೆ, ಈ ಸಮಸ್ಯೆ ಬಗೆಹರಿಯುತ್ತದೆ. ಡಾ. ಭಾರತಿ ಶ್ಯಾಮರಾಜ್, ಪ್ರಾಂಶುಪಾಲೆ ಮಂಜೂರಾತಿ ಬಯಸಿ ಸಲ್ಲಿಸಲಾಗಿರುವ ಮನವಿ ಪ್ರಕ್ರಿಯೆಯ ಯಾವ ಹಂತದಲ್ಲಿ ಇದೆ ಎಂಬುದನ್ನು ಪರಿಶೀಲಿಸಿ, ಕೂಡಲೆ ಸರ್ಕಾರದ ಗಮನಕ್ಕೆ ತರಲಾಗುವುದು. ಅರಳ್ ಕುಮಾರ್, ಉಪವಿಭಾಗಾಧಿಕಾರ