ನ್ಯೂಸ್

ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಚುನಾವಣೆಯ ಹೊಸ್ತಿಲಲ್ಲಿಯೇ ಹಾಲಿ ಅಧ್ಯಕ್ಷ ಹಾಗೂ ಸ್ಪರ್ಧೆ ಸುರೇಶ್‌ಬಾಬು ವಿರುದ್ಧ ಕೇಸು ದಾಖಲು / ಸರ್ಕಾರಿ ನೌಕರರ ಚುನಾವಣೆ ಮೇಲೆ ರಾಜಕಾರಣಿಗಳ ಕರಿನೆರಳು / ಜಿದ್ದಾಜಿದ್ದಿಯಾದ ರಂಗೇರಿದ ಚುನಾವಣಾ ಕಣ

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆ ಇನ್ನು ಕೇವಲ ೦೩ ದಿನಗಳು ಬಾಕಿ ಇರುವಾಗಲೇ ಹಾಲಿ ಅಧ್ಯಕ್ಷ ಹಾಗೂ ೨ನೇ ಬಾರಿಗೆ ಪುನರ್ ಆಯ್ಕೆ ಬಯಸಿ ಸ್ಪರ್ಧೆಯಲ್ಲಿರುವ ಜಿ.ಸುರೇಶ್‌ಬಾಬು ವಿರುದ್ಧ ಮಾಲೂರು ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಡಿ.೪ ರಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗಧಿಯಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಜಿ.ಸುರೇಶ್‌ಬಾಬು ಮತ್ತು ಕಂದಾಯ ಇಲಾಖೆಯ ಅಜಯ್‌ಕುಮಾರ್ ಪ್ರತಿಸ್ಪರ್ಧಿಗಳಾಗಿದ್ದಾರೆ. ಅಧ್ಯಕ್ಷ ಸ್ಥಾನದ ಚುನಾವಣೆ ರಂಗೇರಿದ್ದು, ರಾಜಕಾರಣಿಗಳು ಈ ಚುನಾವಣೆಗೆ ರಂಗಪ್ರವೇಶ ಮಾಡಿದ್ದು, ಅಜಯ್‌ಕುಮಾರ್‌ಗೆ ಕೋಲಾರದ ಶಾಸಕ ಕೊತ್ತೂರು ಮಂಜುನಾಥ್ ಸೇರಿದಂತೆ ಕೆಲವು ಶಾಸಕರು ಬೆಂಬಲವನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಹಾಲಿ ಅಧ್ಯಕ್ಷ ಸುರೇಶ್‌ಬಾಬು ಪುನರ್ ಆಯ್ಕೆ ಬಯಸಿ ಕಣಕ್ಕೆ ಇಳಿದಿದ್ದು, ಚುನಾವಣೆಯ ಹೊಸ್ತಿಲಲ್ಲಿ ಅವರ ಮೇಲೆ ಆರೋಪಗಳನ್ನು ಹೊರಿಸುವ ಕೆಲಸ ನಡೆಯುತ್ತಿದ್ದು, ಶುಕ್ರವಾರ ಕೋಲಾರದಲ್ಲಿ ಜಿಲ್ಲಾಧಿಕಾರಿ ಕಛೇರಿ ಎದುರು ಜಮೀನು ವಿಷಯ ಒಂದಕ್ಕೆ ದಾಖಲೆಗಳನ್ನು ತಿದ್ದಿದ್ದಾರೆ ಎಂದು ಸಂಘ ಸಂಸ್ಥೆಗಳ ಮೂಲಕ ಪ್ರತಿಭಟನೆಯನ್ನು ನಡೆಸಲಾಯಿತು.

ಶನಿವಾರ ರಾತ್ರಿ ಮಾಲೂರು ತಾಲ್ಲೂಕು, ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕಿ ನಿವೇದಿತ ಅವರು ನೀಡಿರುವ ದೂರಿನ ಆಧಾರದ ಮೇಲೆ ಮಾಲೂರು ಪೋಲಿಸ್ ಠಾಣೆಯಲ್ಲಿ ಕೋಲಾರದ ಭೂದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಯ ಸೂಪರ್‌ವೈಸರ್ ಸುರೇಶ್‌ಬಾಬು ಮತ್ತು ಪ್ರಸ್ತುತ ಕೋಲಾರದಲ್ಲಿ ಸರ್ವೇಯರ್ ಆಗಿರುವ ಮಾಲೂರು ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿಯ ಸರ್ವೇಯರ್ ಬಿ.ನಾಗರಾಜ್ ವಿರುದ್ಧ ದೂರು ದಾಖಲಿಸಲಾಗಿದೆ.

ಪ್ರಕರಣದಲ್ಲಿ ನಾಗರಾಜ್‌ರವರನ್ನು ಮೊದಲ ಮತ್ತು ಸುರೇಶ್‌ಬಾಬು ರವರನ್ನು ೨ನೇ ಆರೋಪಿ ಎಂದು ಹೆಸರಿಸಲಾಗಿದೆ. ಜೊತೆಗೆ ಇತರರು ಆರೋಪಗಳ ಪಟ್ಟಿಯಲ್ಲಿ ನಮೂದಿಸಲಾಗಿದೆ. ೨೦೨೪ ಜುಲೈ ೧೧ ರಿಂದ ೨೦೨೪ ನವೆಂಬರ್ ೨೧ರ ವರೆವಿಗೆ ಮಾಲೂರು ಭೂ ದಾಖಲೆಗಳ ಇಲಾಖೆಯಲ್ಲಿ ಕೃತ್ಯ ನಡೆದಿದೆ ಎಂದು ನ.೩೦ ರಂದು ಮಾಲೂರು ಠಾಣೆಗೆ ನೀಡಿರುವ ದೂರಿನಲ್ಲಿ ನಿವೇದಿತ ಆರೋಪಿಸಿದ್ದಾರೆ.

ಇದರಂತೆ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ೨೦೨೩ರ ಸೆಕ್ಷನ್ ೩೧೯(೨), ೩೧೮(೪), ೩೩೬(೨), ೩೩೬(೧೦೦), ೩೪೦(೨) ಕಾಯ್ದೆಗಳಲ್ಲಿ ಕೇಸು ದಾಖಲಾಗಿದೆ. ಇವೆಲ್ಲ ಕೇಸುಗಳು ಸಹ ಸರ್ಕಾರಿ ದಾಖಲೆಗಳ ತಿದ್ದುವಿಕೆ, ಅಪಹರಣ, ಅಧಿಕಾರ ದುರುಪಯೋಗ ಆರೋಪಗಳಾಗಿವೆ.

ಮಾಲೂರು ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ದಾಖಲೆಗಳನ್ನು ಅಪಹರಿಸಿ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಡಿ.೪ ರಂದು ಅಧ್ಯಕ್ಷರ ಚುನಾವಣೆ ನಡೆಯಲಿದೆ. ಸುರೇಶ್‌ಬಾಬು ಪರಮ ಆಪ್ತನಾಗಿದ್ದ ಅಜಯ್‌ಕುಮಾರ್ ರವರು ಅವರ ಪ್ರತಿಸ್ಪರ್ಧಿಯಾಗಿದ್ದಾರೆ.

ಶತಾಯಗತಾಯವಾಗಿ ಸುರೇಶ್‌ಬಾಬು ರವರನ್ನು ಚುನಾವಣೆಯಲ್ಲಿ ಸೋಲಿಸಬೇಕೆಂದು ಅಜಯ್‌ಕುಮಾರ್ ತಂಡ ಕಸರತ್ತುಗಳನ್ನು ನಡೆಸುತ್ತಿದ್ದು, ಚುನಾವಣೆಯ ಸಮಯದಲ್ಲಿ ಸುರೇಶ್‌ಬಾಬು ವಿರುದ್ಧ ಕೇಸು ದಾಖಲಿಸುವಂತೆ ಮಾಡಿದ್ದಾರೆ ಎಂದು ಸುರೇಶ್‌ಬಾಬು ರವರ ತಂಡದ ಕಡೆಯವರು ಆರೋಪಿಸುತ್ತಿದ್ದಾರೆ.

ಅಜಯ್‌ಕುಮಾರ್ ಕಂದಾಯ ಇಲಾಖೆಯ ನೌಕರನಾಗಿದ್ದು, ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಜಿಲ್ಲಾಧಿಕಾರಿಗಳಿಗೂ ಆಪ್ತರಾಗಿದ್ದಾರೆ. ಹಾಗೂ ಶಾಸಕ ಕೊತ್ತೂರು ಮಂಜುನಾಥ್ ಮತ್ತು ಎಂ.ಎಲ್.ಸಿ. ಅನಿಲ್‌ಕುಮಾರ್ ರವರಿಗೆ ಆಪ್ತರಾಗಿದ್ದು, ಜಿಲ್ಲಾಡಳಿತ ಪ್ರಭಾವವನ್ನು ಬಳಸಿಕೊಂಡು ಚುನಾವಣೆಯ ಹೊಸ್ತಿಲಲ್ಲಿ ಸುರೇಶ್‌ಬಾಬು ವಿರುದ್ಧ ಕೇಸುಗಳನ್ನು ದಾಖಲಿಸುವ ಕೆಲಸ ಹಾಗೂ ಸಂಘ ಸಂಸ್ಥೆಗಳ ಮೂಲಕ ಪ್ರತಿಭಟನೆ ನಡೆಸುವ ಕೆಲಸವನ್ನು ಅಜಯ್‌ಕುಮಾರ್ ತಂಡ ಮಾಡುತ್ತಿದೆ ಎಂಬ ಆರೋಪವನ್ನು ಸುರೇಶ್‌ಬಾಬು ರವರ ತಂಡ ಮಾಡುತ್ತಿದೆ.

ಡಿ.೪ ರಂದು ನಡೆಯುವ ಚುನಾವಣೆಯಲ್ಲಿ ಯಾರ ಗೆಲುವು ಎಂಬುದು ಗೊತ್ತಾಗುತ್ತದೆ. ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ. ಹಾಲಿ ಅಧ್ಯಕ್ಷ ಸುರೇಶ್‌ಬಾಬು ನೌಕರರ ಹಿತ ಕಾಪಾಡುವ ಕೆಲಸ ಮಾಡಿದ್ದಾರೆ. ಈ ಚುನಾವಣೆಯಲ್ಲಿ ರಾಜಕಾರಣ ಮುನ್ನೆಲೆಗೆ ತರುತ್ತಿರುವುದು ಸರಿಯಲ್ಲ. ನೌಕರರ ಚುನಾವಣೆಯಲ್ಲಿ ರಾಜಕಾರಣಿಗಳು ಅಸ್ತಕ್ಷೇಪ ಮಾಡಬಾರದು ಎಂಬುದು ಚುನಾವಣಾ ಕಣದಿಂದ ದೂರ ಸರಿದಿರುವ ನೌಕರರ ಮಾತಾಗಿದೆ.

ಚಿತ್ರ ೦೧ ಕೆ.ಎಲ್.ಆರ್. ೦೨ : ಮಾಲೂರು ಪೋಲಿಸ್ ಠಾಣೆ

ಚಿತ್ರ ೦೧ ಕೆ.ಎಲ್.ಆರ್. ೦೨ಎ : ಸುರೇಶ್‌ಬಾಬು ರವರ ಭಾವಚಿತ್ರ