ನ್ಯೂಸ್

ಸರ್ಕಾರಿ ನಿಯಮ ಗಾಳಿಗೆ ತೂರಿ ಘಟಕ ಉದ್ಘಾಟನೆ

ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿ ಗ್ರಾಮದ ಬಳಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಚಿವ ಕೆ.ವೆಂಕಟೇಶ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಡಿ.ಟಿ.ಸ್ವಾಮಿ, ರಹಮತ್‌ಜಾನ್ ಬಾಬು, ಲೋಕೇಶ್, ಈರಯ್ಯ, ವೀರಭದ್ರ ಶೆಟ್ಟಿ ಇತರರಿದ್ದರು.

  • ಪಿರಿಯಾಪಟ್ಟಣ: ಹಿಂದಿನ ಸರ್ಕಾರದ ಅವಧಿಯಲ್ಲಿ ತಾಲೂಕಿನಲ್ಲಿ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಪಂಚವಳ್ಳಿ ಗ್ರಾಮದ ಬಳಿ ಪಶು ಆಹಾರ ತಯಾರಿಕಾ ಘಟಕ ನಿರ್ಮಾಣ ಮಾಡಲು ಭೂಮಿಪೂಜೆ ನಡೆಸಿದ್ದಾರೆ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ಆರೋಪಿಸಿದರು.
    ತಾಲೂಕಿನ ಪಂಚವಳ್ಳಿ ಹಾಗೂ ಮಾಲಂಗಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿ ಕುಂದು ಕೊರತೆ ಸಭೆ ನಡೆಸಿ ಸಚಿವರು ಮಾತನಾಡಿದರು.

  • ತಾಲೂಕಿನ ಸತ್ಯಗಾಲ ಬಳಿ ಪಶು ಆಹಾರ ಘಟಕ ಸ್ಥಾಪನೆ ಮಾಡಲೆಂದು ನಿಗಮದ ವತಿಯಿಂದ 12 ಎಕರೆ ಭೂಮಿ ಖರೀದಿ ಮಾಡಿದ್ದು ಖರೀದಿ ಸಂದರ್ಭದಲ್ಲಿ ಜಮೀನಿನ ಮಾಲೀಕನಿಗೆ ನೀಡಿರುವ ಹಣ ಹಾಗೂ ನಿಗಮದಿಂದ ಪಡೆದ ಹಣದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಇದರಲ್ಲಿ ಮೈಮುಲ್ ಮತ್ತು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರು ನೇರವಾಗಿ ಭಾಗಿಯಾಗಿದ್ದು ಲೋಪ ಎಸಗಿದ್ದಾರೆ ಎಂದು ಆರೋಪಿಸಿದರು.

  • ಯಾವುದೇ ಸರ್ಕಾರಿ ಅಥವಾ ನಿಗಮಗಳ ವ್ಯವಹಾರ ನಡೆಯಬೇಕಿದ್ದರೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಮುಖಾಂತರವೇ ನಡೆಸಬೇಕು. ಆದರೆ ಮೈಮುಲ್ ಮತ್ತು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರು ನಿಯಮಗಳನ್ನು ಉಲ್ಲಂಘಿಸಿ ಎಂಸಿಡಿಸಿಸಿ ಬ್ಯಾಂಕ್‌ನಲ್ಲಿ ವ್ಯವಹರಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದರು. ಈ ವಿಚಾರವಾಗಿ ಮೈಮುಲ್ ಅಧ್ಯಕ್ಷರೇ ಉತ್ತರ ನೀಡಬೇಕು ಎಂದು ಅಧ್ಯಕ್ಷ ಪಿ.ಎಂ.ಪ್ರಸನ್ನ ಅವರ ಹೆಸರು ಹೇಳದೆ ಟೀಕಿಸಿದರು. ಪಶು ಆಹಾರ ತಯಾರಿಕಾ ಘಟಕ ನಿರ್ಮಾಣ ಮಾಡಲು ಮುಂದಾಗಿರುವ ಖಾಸಗಿ ಕಂಪನಿಯವರೊಂದಿಗೆ ಈಗಾಗಲೇ ಮಾತನಾಡಿದ್ದು ಕೆಲವೇ ದಿನಗಳಲ್ಲಿ ಕೆಲಸ ಪ್ರಾರಂಭಿಸಲಾಗುವುದು ಎಂದರು.

  • ಮಾಜಿ ಶಾಸಕ ಕೆ.ಮಹದೇವ್ ಹಾಗೂ ಪುತ್ರ ಮೈಮುಲ್ ಅಧ್ಯಕ್ಷ ಪ್ರಸನ್ನ ಅವರ ಅವಧಿಯಲ್ಲಿ ತಾಲೂಕಿನ ಜನತೆಗೆ ಸುಳ್ಳಿನ ಮೂಲಕವೇ ಯಾಮರಿಸಿದ್ದರು. ಅದಕ್ಕೆ ಜನತೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದ್ದು ತಾಲೂಕಿನ ಅಭಿವೃದ್ಧಿ ವಿಚಾರವಾಗಿ ಹಂತ ಹಂತವಾಗಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.
    ಈ ವೇಳೆ ಗ್ರಾಪಂ ವತಿಯಿಂದ ಹಾಗೂ ಸ್ಥಳೀಯ ಮುಖಂಡರು ಸಚಿವರನ್ನು ಸನ್ಮಾನಿಸಿದರು. ಕೆಪಿಸಿಸಿ ಸದಸ್ಯ ನಿತಿನ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ ಸ್ವಾಮಿ, ರಹಮತ್ ಜಾನ್ ಬಾಬು, ಮುಖಂಡರಾದ ಲೋಕೇಶ್, ಈರಯ್ಯ, ಮಾಸ್ಟರ್ ಮೋಹನ್, ಪಿಡಿಒ ವೀರಭದ್ರ ಶೆಟ್ಟಿ ಮತ್ತು ಸಿಬ್ಬಂದಿ ವಿವಿಧ ಇಲಾಖೆ ಅಧಿಕಾರಿಗಳು ಮುಖಂಡರು ಗ್ರಾಮಸ್ಥರು ಇದ್ದರು.