ನ್ಯೂಸ್

ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೌಚಗೃಹ ತೆರವು

ಕೆ.ಆರ್. ನಗರ ಪಟ್ಟಣದ 11ನೇ ವಾರ್ಡ್‌ನಲ್ಲಿ ಪುರಸಭೆ ಮುಖ್ಯಾಧಿಕಾರಿ ಡಾ. ಜಯಣ್ಣ ಅವರ ನೇತೃತ್ವದಲ್ಲಿ ಅಕ್ರಮ ಶೌಚಗೃಹವನ್ನು ಗುರುವಾರ ತೆರವುಗೊಳಿಸಲಾಯಿತು.

ಕೆ.ಆರ್. ನಗರ: ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೌಚಗೃಹಗಳನ್ನು ಪುರಸಭೆ ಮುಖ್ಯಾಧಿಕಾರಿ ಡಾ. ಜಯಣ್ಣ ನೇತೃತ್ವದಲ್ಲಿ ಗುರುವಾರ ಪುರಸಭೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನೆಲಸಮಗೊಳಿಸಿದರು.


ಖಾಸಗಿ ವ್ಯಕ್ತಿಯೊಬ್ಬ 11ನೇ ವಾರ್ಡ್‌ನಲ್ಲಿ ಹಲವು ವರ್ಷಗಳಿಂದ ಕನ್ಸರ್‌ವೆನ್ಸಿ ಗಲ್ಲಿಯಲ್ಲಿ ಅಕ್ರಮವಾಗಿ ಶೌಚಗೃಹ ನಿರ್ಮಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ದೂರಿನ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಅದನ್ನು ನೆಲಸಮ ಮಾಡುವ ಮೂಲಕ ಪಟ್ಟಣದಾದ್ಯಂತ ಅಕ್ರಮವಾಗಿ ಕಟ್ಟಡ ನಿರ್ಮಾಣ, ಶೌಚಗೃಹ, ಇನ್ನಿತರ ತಡೆಗೋಡೆಗಳನ್ನು ನಿರ್ಮಿಸುತ್ತಿರುವ ಖಾಸಗಿ ವ್ಯಕ್ತಿಗಳಿಗೆ ಬಿಸಿ ಮುಟ್ಟಿಸಿದರು.


ಪಟ್ಟಣದ 11ನೇ ವಾರ್ಡಿನಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲು ಟೆಂಡರ್ ಕರೆಯಲಾಗಿತ್ತು. ರಸ್ತೆ ಮಾಡಲು ಕನ್ಸರ್‌ವೆನ್ಸಿ ಗಲ್ಲಿಯಲ್ಲಿ ಶೌಚಗೃಹವನ್ನು ನಿರ್ಮಿಸಿದ ಮಾಲೀಕನಿಗೆ ನೋಟಿಸ್ ನೀಡಿದರೂ ತೆರವುಗೊಳಿಸದೆ ಇರುವುದರಿಂದ ಪುರಸಭೆಯ ಅಧ್ಯಕ್ಷರು ಸದಸ್ಯರೊಡಗೂಡಿ ಕಾರ್ಯಾಚರಣೆ ನಡೆಸಿ ಜೆಸಿಬಿ ಮೂಲಕ ತೆರವುಗೊಳಿಸಿ ರಸ್ತೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟರು.


ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಜಯಣ್ಣ, ಪಟ್ಟಣ ಸುಂದರವಾಗಿ ಸ್ವಚ್ಛವಾಗಿ ಇರಬೇಕಾದರೆ ಸಾರ್ವಜನಿಕರು, ನಾಗರಿಕರು ಪುರಸಭಾ ಆಡಳಿತಕ್ಕೆ ಸಹಕಾರ ನೀಡಬೇಕು. ಸರ್ಕಾರದ ಆಸ್ತಿಯನ್ನು ರಕ್ಷಿಸಲು ಮುಂದಾಗಬೇಕು. ಅಕ್ರಮ ಕಟ್ಟಡಗಳು ಕಂಡುಬಂದಲ್ಲಿ ಪುರಸಭೆ ಗಮನಕ್ಕೆ ತರಬೇಕೆಂದು ಮನವಿ ಮಾಡಿದರು.


ಇದೇ ಸಂದರ್ಭದಲ್ಲಿ ಮುಖ್ಯಾಧಿಕಾರಿ ನಡೆಯನ್ನು ಪುರಸಭಾ ಮಾಜಿ ಅಧ್ಯಕ್ಷ ಕೆ.ಜಿ. ಸುಬ್ರಹ್ಮಣ್ಯ ಸೇರಿದಂತೆ ಇತರ ನಾಗರಿಕರು ಮತ್ತು ಮುಖಂಡರು ಶ್ಲಾಘಿಸಿದರು. ಇದೇ ರೀತಿ ಪಟ್ಟಣದ 23 ವಾರ್ಡುಗಳಲ್ಲಿ ಅಕ್ರಮ ಕಟ್ಟಡ ನಿರ್ಮಾಣ, ಅಕ್ರಮ ಖಾತೆಗಳು ಹೆಚ್ಚಾಗಿದ್ದು ಆ ಆಸ್ತಿಯನ್ನು ರಕ್ಷಿಸುವಂತಹ ಕೆಲಸವನ್ನು ಮಾಡಬೇಕೆಂದು ಮನವಿ ಮಾಡಿದರು.


ಪುರಸಭಾ ಕಿರಿಯ ಇಂಜಿನಿಯರ್ ಕೆ.ಆರ್.ಚಂದ್ರಶೇಖರ್, ಕಂದಾಯ ಅಧಿಕಾರಿ ರಮೇಶ್, ಆರೋಗ್ಯ ನಿರೀಕ್ಷಕರಾದ ರಾಜೇಂದ್ರ, ಲೋಕೇಶ, ಸಿಬ್ಬಂದಿ ರಘು, ಪ್ರಮೋದ್, ರಂಗಸ್ವಾಮಿ ಇನ್ನಿತರರು ಇದ್ದರು.