- ಬೆಟ್ಟದಪುರ: ಬೆಟ್ಟದಪುರ ಸಮೀಪದ ಭುವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಣಸೂರು ಗ್ರಾಮದಲ್ಲಿನ ಸರ್ಕಾರಿ ಜಾಗ ಮಾಲೀಕತ್ವ ಸಂಬಂಧ ಎರಡು ಜನಾಂಗಗಳ ನಡುವೆ ವಾಗ್ವಾದ ನಡೆದಿದ್ದು, ಶುಕ್ರವಾರ ಪೊಲೀಸರು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಧ್ಯಪ್ರವೇಶಿಸಿ ತಿಳಿಗೊಳಿಸಿದ್ದಾರೆ.
ಕೊಣಸೂರು ಗ್ರಾಮದ ಮಧ್ಯಭಾಗದಲ್ಲಿನ ಸರ್ಕಾರಿ ಜಾಗ ಸಂಬಂಧ ಗ್ರಾಮದ ಮೇದಾರ ಜನಾಂಗ ಹಾಗೂ ಕುಂಬಾರ ಶೆಟ್ಟಿ ಜನಾಂಗದ ನಡುವೆ ಹಲವು ವರ್ಷಗಳಿಂದ ವ್ಯಾಜ್ಯ ನಡೆಯುತ್ತಿತ್ತು, ಕೆಲ ದಿನಗಳ ಹಿಂದೆ ಗ್ರಾಮದ ಮೇದಗಿರಿ ಜನಾಂಗದವರು ಆ ಸ್ಥಳದಲ್ಲಿ ಮೇದಾರಕೇತೇಶ್ವರ ಕ್ಷೇಮಾಭಿವೃದ್ಧಿ ಸಂಘ ಎಂಬ ನಾಮಫಲಕ ಅಳವಡಿಸಿದ್ದರು. ಈ ವಿಚಾರವಾಗಿ ಶುಕ್ರವಾರ ಎರಡು ಜನಾಂಗಗಳ ನಡುವೆ ವಾದ, ವಿವಾದ ನಡೆದಿತ್ತು.
ಮೇದಾರ ಜನಾಂಗದ ಮುಖಂಡರಾದ ಕೆ.ಬಿ ಮೂರ್ತಿ ಹಾಗೂ ಪಾಲಾಕ್ಷ ಮಾತನಾಡಿ, ಮೇದಾರ ಜನಾಂಗದವರಿಗೆ ಗುಡಿ ಕೈಗಾರಿಕೆ ಪ್ರಾರಂಭಿಸಲು ಈಗಾಗಲೇ ಗುರುತು ಮಾಡಿರುವ ಸ್ಥಳವನ್ನು ನಿಗದಿ ಮಾಡಿಕೊಡಬೇಕೆಂದು ಗ್ರಾಮ ಪಂಚಾಯಿತಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಯಾವುದೇ ಸಮಸ್ಯೆ ಬಗೆಹರಿದಿಲ್ಲ. ಆದ್ದರಿಂದ ನಾವು ನಮ್ಮ ಸಂಘದ ನಾಮಫಲಕವನ್ನು ಅಳವಡಿಸಿದ್ದೇವೆ. ಆದರೆ ಕುಂಬಾರ ಶೆಟ್ಟಿ ಜನಾಂಗದವರಿಗೆ ಸಮುದಾಯ ಭವನ, ರಾಮಮಂದಿರ ಎಲ್ಲವೂ ಇದ್ದರೂ ಜಾಗ ತಮಗೆ ಸೇರಬೇಕೆಂದು ಮೇದಾರರನ್ನು ಬೀದಿ ಪಾಲು ಮಾಡುತ್ತಿದ್ದಾರೆ. ಶಾಂತಿಯುತವಾಗಿ ಕಾನೂನು ರೀತಿಯಲ್ಲಿ ಜಾಗವನ್ನು ಮೇದಾರ ಜನಾಂಗದವರಿಗೆ ಕೊಡಿಸುವಂತೆ ಒತ್ತಾಯ ಮಾಡಿದರು.
ಪಿಡಿಒ ದೇವರಾಜೇಗೌಡ ಮಾತನಾಡಿ, ಈ ಜಾಗವು ಸರ್ಕಾರದ ಆಸ್ತಿಯಾಗಿದ್ದು, ಎರಡು ಜನಾಂಗದವರು ನಮಗೆ ಜಾಗ ಕೊಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಎರಡು ಜನಾಂಗದವರಿಗೂ ಸಮಸ್ಯೆಯಾಗದಂತೆ ತಟಸ್ಥವಾಗಿ ಉಳಿಯುವಂತೆ ಹೇಳಲಾಗಿತ್ತು, ಮೇದಾರ ಜನಾಂಗದವರಿಗೆ ಬೇರೆ ಸ್ಥಳವಿದ್ದರೆ ಅವರಿಗೆ ಸಮುದಾಯಭವನ ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಸರ್ವ ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು. ಈ ಜಾಗದ ವಿಚಾರವಾಗಿ ಸರ್ಕಾರಿ ಚೌಕಟ್ಟಿನಲ್ಲಿ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನಂತರ ಪೊಲೀಸರ ಮಧ್ಯಪ್ರವೇಶದಿಂದ ಮೇದಾರ ಸಮುದಾಯದವರು ಅಳವಡಿಸಿದ್ದ ನಾಮಫಲಕವನ್ನು ಗ್ರಾಮ ಪಂಚಾಯಿತಿ ವತಿಯಿಂದ ತೆರವುಗೊಳಿಸಿ, ಅತಿಕ್ರಮ ಪ್ರವೇಶ ನಿಷೇಧಿಸಿದೆ ಎಂಬ ನಾಮಫಲಕವನ್ನು ಗ್ರಾಮ ಪಂಚಾಯಿತಿ ವತಿಯಿಂದ ಅಳವಡಿಸಲಾಯಿತು.