ಹುಬ್ಬಳ್ಳಿ:
ಸರ್ಕಾರಿ ಕಚೇರಿಗಳ ವಿದ್ಯುತ್ ಬಿಲ್ ಬಾಕಿಯಿಂದ ಉಂಟಾಗುತ್ತಿರುವ ಅನಗತ್ಯ ತೊಂದರೆಗಳನ್ನು ಕಡಿಮೆ ಮಾಡುವ ಸಲುವಾಗಿ ಪ್ರೀಪೆಡ್ ಮೀಟರ್ ಅಳವಡಿಸುವ ಕುರಿತು ಚಿಂತನೆ ನಡೆದಿದೆ ಎಂದು ಇಂಧನ ಸಚಿವ ವಿ. ಸುನೀಲಕುಮಾರ ತಿಳಿಸಿದರು.
ವಿಜಯಪುರ ಪ್ರವಾಸದಲ್ಲಿರುವ ಅವರು
ನಗರದಲ್ಲಿ ಮಂಗಳವಾರ ನೂತನ ಪವರ್ ಮ್ಯಾನ್ ಗಳಿಗೆ ಶುಭ ಹಾರೈಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ವಿದ್ಯುತ್ ಬಿಲ್ ಬಾಕಿ ಇಟ್ಟುಕೊಂಡ ಸರ್ಕಾರಿ ಇಲಾಖೆಗಳ ವಿರುದ್ದವೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಬಿಬಿಎಂಪಿ. ನೀರಾವರಿ ಇಲಾಖೆ, ಕೆಲ ಗ್ರಾಪಂಗಳ ವಿದ್ಯುತ್ ಪೂರೈಕೆ ನಿಲ್ಲಿಸಲಾಗಿತ್ತು. ಈ ವಿಷಯದಲ್ಲಿ ಬೇಧ ಭಾವ ಇಲ್ಲ. ವಿದ್ಯುತ್ ಕಡಿತ ಮಾಡಿದ್ದರಿಂದ ಸಮಸ್ಯೆಯೂ ಆಗಿತ್ತು. ಹಾಗಾಗಿ ಪ್ರೀಪೇಡ್ ಮೀಟರ್ ಬಗ್ಗೆ ಯೋಚಿಸಲಾಗಿದೆ ಎಂದರು.
ರಾಜ್ಯದಲ್ಲಿ ವಿದ್ಯುತ್ ಪೂರೈಕೆ ಸಮರ್ಪಕತೆ ಹಾಗೂ ನಿರಂತರತೆ ಕಾಪಾಡುವ ಸಲುವಾಗಿ
ಹೊಸದಾಗಿ ೩೭ ಕಡೆಗಳಲ್ಲಿ ಹೊಸ ಸಬ್ ಸ್ಟೇಷನ್ ಗಳನ್ನು ನಿರ್ಮಾಣ ಮಾಡಲಾಗಿದೆ.
ಜನರ ಬೇಡಿಕೆಗೆ ಅನುಗುಣವಾಗಿ ಸ್ಟೇಶನ್ ಗಳನ್ನು ಸ್ಥಾಪನೆ ಮಾಡಲಾಗಿದೆ. ಈ ಕಾರ್ಯವನ್ನು ಒಂದು ವರ್ಷದಲ್ಲಿ ಪೂರ್ಣಗೊಳಿಸಲಾಗಿದೆ ಎಂದರು.
ಇಲಾಖೆಗೆ ಇನ್ನಷ್ಟು ಹೊಸ ಬೇಡಿಕೆ ಬರುತ್ತಿವೆ. ಈ ವರ್ಷದ ಬಜೆಟ್ ನಲ್ಲಿ ಅವುಗಳನ್ನು ಈಡೇರಿಸಲಾಗುತ್ತದೆ.
ವಿಜಯಪುರದಲ್ಲಿ ಈ ಬಗ್ಗೆ ಪರಿಶೀಲನೆ ಸಭೆ ನಡೆಯಲಿದ್ದು,
ಹೆಸ್ಕಾಂ ಹಾಗೂ ಜನಪ್ರತಿನಿಧಿಗಳು ನೀಡಿರುವ ಮನವಿಗಳ ಬಗ್ಗೆ ಚರ್ಚೆ ಮಾಡಲಾಗುವುದು.
ವಿದ್ಯುತ್ ನಿಲುಗಡೆ ಬಗ್ಗೆ ಮೊದಲೇ ಸರಿಯಾದ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ಹೇಳಿದರು.
ಸೋಲಾರ್ ರೂಫ್ ಟಾಪ್ ಅಳವಡಿಕೆಗೆ ಬೆಸ್ಕಾಂ ಅನ್ನು ನೋಡಲ್ ಅಧಿಕಾರಿಯಾಗಿ ಮಾಡಲಾಗಿದೆ. ಅವರು ಸೌರ ವಿದ್ಯುತ್ ಬಗ್ಗೆ ಪರಿಶೀಲನೆ ಮಾಡುತ್ತಾರೆ. ಈಚೆಗೆ ಇವಿ ಅಭಿಯಾನ ಮಾಡಿದ್ದೇವೆ ಎಂದರು.
ಮುಧೋಳ ಬೀಳಗಿ ಮತ್ತು ಸಿಂಧನೂರಲ್ಲಿ ಕೆಪಿಟಿಸಿಎಲ್ ನಿಂದ ನಿರ್ಮಿಸಿದ ೧೧೦ ಕೆವಿ ವಿದ್ಯುತ್ ಸಬ್ ಸ್ಟೇಷನ್ ಗಳ ಉದ್ಘಾಟನೆ ಇಂದು ನಡೆಯಲಿದೆ ಎಂದರು.