ನ್ಯೂಸ್

ಸರ್ಕಾರಿ ಆಸ್ಪತ್ರೆಗಳಲ್ಲಿ ಮೆನು ಚಾರ್ಟ್ ಕಡ್ಡಾಯ

ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಬುಧವಾರ ನಗರದ ಕೆ.ಆರ್.ಆಸ್ಪತ್ರೆೆ, ಚೆಲುವಾಂಬ ಹಾಗೂ ಕೆಆರ್‌ಎಸ್ ರಸ್ತೆೆಯ ಸೂಪರ್ ಸ್ಪೆೆಷಾಲಿಟಿ ಆಸ್ಪತ್ರೆೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಈ ವೇಳೆ ಶುದ್ಧ ಕುಡಿಯುವ ನೀರಿನ ಸಮಸ್ಯೆ, ಅಶುಚಿತ್ವ, ಅನೈರ್ಮಲ್ಯ, ಕಳಪೆ ಆಹಾರ ಕಿಟ್ ವಿತರಣೆ ಹಾಗೂ ರೋಗಿಗಳಿಗೆ ದೊರೆಯದ ಗುಣಮಟ್ಟದ ಚಿಕಿತ್ಸೆ ಸೇರಿದಂತೆ ವಿವಿಧ ಸಮಸ್ಯೆಗಳ ದರ್ಶನವಾಯಿತು.

ಈ ಸಂಬಂಧ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡುವಂತೆ ಸೂಚಿಸಿದರು. ಎಲ್ಲ ನ್ಯೂನತೆಗಳನ್ನು ಸರಿಪಡಿಸಲು 4 ವಾರಗಳ ಗಡುವು ನೀಡಿದರು. ಸಮಸ್ಯೆೆಗಳನ್ನು ಸರ್ಕಾರದ ಗಮನಕ್ಕೆೆ ತರುವುದಾಗಿಯೂ ಪ್ರಕಟಿಸಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶೀಲನೆ ವೇಳೆ ಆಹಾರದ ಸ್ಯಾಂಪಲ್ ಸಂಗ್ರಹಿಸಿಕೊಳ್ಳಲಾಗಿದೆ. ಗುಣಮಟ್ಟ ಪರೀಕ್ಷೆ ನಡೆಸಲು ಲ್ಯಾಬ್‌ಗೆ ಕೊಡಲಾಗುತ್ತದೆ. ಅಲ್ಲಿಂದ ವರದಿ ಬಂದ ಬಳಿಕ ಊಟ ಕೊಡುವ ಟೆಂಡರ್‌ದಾರರ ಮೇಲೆ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಗುಣಮಟ್ಟದ ಆಹಾರ ಕೊಡಬೇಕು. ಟೆಂಡರ್‌ದಾರ ತನ್ನ ಮನೆಯ ಹಣದಿಂದ ಆಹಾರ ನೀಡುವುದಿಲ್ಲ. ರೋಗಿಗಳ ಕುಟುಂಬದವರು ಅವನ ಹಿಂದೆ ಅಲೆಯಬೇಕಿಲ್ಲ. ಸರ್ಕಾರ ಬಡವರಿಗಾಗಿ ರೂಪಿಸಿರುವ ಯೋಜನೆಯನ್ನು ಪರಿಣಾಮಕಾರಿಯಾಗಿ ಅಧಿಕಾರಿಗಳು ಅನುಷ್ಠಾನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.

ಶೌಚಗೃಹಗಳು ಬಳಸಲು ಯೋಗ್ಯವಾಗಿಲ್ಲ. ಚೆಲುವಾಂಬ ಆಸ್ಪತ್ರೆೆಯ ಹೆರಿಗೆ ಮತ್ತು ಮಕ್ಕಳ ವಾರ್ಡ್ ನಡುವೆ ತುಂಬಾ ಗಲೀಜು ಇದೆ. ಇಲ್ಲಿ ಮೂಗು ಮುಚ್ಚಿಕೊಂಡು ಹೋಗಬೇಕು. ಎರಡು ದಿನಗಳಲ್ಲಿ ಶುಚಿ ಮಾಡುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಕೆ.ಆರ್.ಆಸ್ಪತ್ರೆೆಯಲ್ಲಿ ನಿತ್ಯ ಸಾವಿರಾರು ಜನರು ಬಂದು ಹೋಗುತ್ತಾರೆ. ಶುದ್ಧ ಕುಡಿಯುವ ನೀರಿಲ್ಲ. ಶುದ್ಧ ಕುಡಿಯುವ ನೀರು ಪೂರೈಸುವ ಯಂತ್ರಗಳು ಕೆಟ್ಟು ನಿಂತಿವೆ. ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆಗೆ ಅನುದಾನದ ಕೊರತೆ ಇಲ್ಲ. ಅಧಿಕಾರಿಗಳ ನಿರ್ಲಕ್ಷ್ಮ ಎದ್ದು ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಚೆಲುವಾಂಬ ಆಸ್ಪತ್ರೆೆಯಲ್ಲಿ ಪರಿಶೀಲಿಸಿದಾಗ ಮೆನು ಪ್ರಕಾರ ಆಹಾರ ನೀಡದಿರುವುದು ಗಮನಕ್ಕೆೆ ಬಂದಿತು. ಈ ದಿನ ಪಲ್ಯ, ಮೊಸರು ನೀಡಿರಲಿಲ್ಲ. ನೋಟಿಸ್ ಕೊಡುವಂತೆ ಸೂಚನೆ ಕೊಡಲಾಗಿದೆ. ಮುಂಬರುವ ದಿನಗಳಲ್ಲಿ ಎಲ್ಲ ಆಸ್ಪತ್ರೆೆಗಳಲ್ಲಿ ಮೆನು ಚಾರ್ಟ್ ಅಳವಡಿಸಬೇಕು ಎಂದು ಸೂಚಿಸಿರುವುದಾಗಿ ಹೇಳಿದರು.

ಮಕ್ಕಳಿಗೆ ನೀಡಲಾದ ಅವಲಕ್ಕಿಯಲ್ಲಿ ಹುಳು!

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೀಡಲಾದ ಅವಲಕ್ಕಿಯಲ್ಲಿ ಹುಳುಗಳು ಇವೆ. ಅವಧಿ ಮೀರಿದ ರವೆಯನ್ನು ನೀಡಲಾಗಿದೆ ಎಂದು ತೀವ್ರ ಅಸಮಾಧಾನ ಹೊರಹಾಕಿದರು.

ಚೆಲುವಾಂಬ ಆಸ್ಪತ್ರೆೆಯ ಎನ್‌ಆರ್‌ಸಿ ಘಟಕದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ 13 ಮಕ್ಕಳಿದ್ದಾರೆ. ಅವರಿಗೆ ನೀಡಲಾದ ಆಹಾರ ಕಿಟ್ ಕಳಪೆಯಾಗಿದೆ. ಆಹಾರವನ್ನು ಯಾವ ಕಂಪನಿಯಿಂದ ಖರೀದಿಸಲಾಗಿದೆ. ಬಳಸುವ ಅವಧಿ ಯಾವುದೂ ಇಲ್ಲ. ಅಧಿಕಾರಿಗಳು ಹಣ ಉಳಿಸಲು ಕಡಿಮೆ ಗುಣಮಟ್ಟದ ಪದಾರ್ಥಗಳನ್ನು ಖರೀದಿ ಮಾಡಿದ್ದಾರೆ. ಇದು ಕ್ರಿಮಿನಲ್ ಅಪರಾಧ ಎಂದರು.

ಗೋದಾಮಿನಲ್ಲಿವೆ 250 ಹೊಸ ಬೆಡ್!

ಕಿತ್ತು ಹೋಗಿರುವ ಹಳೆಯದಾದ ಬೆಡ್‌ನಲ್ಲಿ ರೋಗಿಗಳು ಮಲಗಿದ್ದಾರೆ. ಆದರೆ, ಗೋದಾಮಿನಲ್ಲಿ 250 ಹೊಸ ಬೆಡ್‌ಗಳು ತುಂಬಿವೆ. ಈ ಬಗ್ಗೆೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಕಾರಣ ಹೇಳುತ್ತಾರೆ. ವಾರ್ಡ್‌ಗಳಿಂದ ಬೇಡಿಕೆ ಬಂದಿಲ್ಲ ಎನ್ನುತ್ತಾರೆ. ಆರು ತಿಂಗಳ ಹಿಂದೆ ಬಂದಿರುವ ಬೆಡ್‌ಗಳನ್ನು ವಿತರಣೆ ಮಾಡಲು ಅಧಿಕಾರಿಗಳಿಗೆ ಸಮಯ ಇಲ್ಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಸ್ಪತ್ರೆೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ತಕ್ಷಣ ಕ್ರಮಕ್ಕೆೆ ಮುಂದಾಗದೆ ಸುಧಾರಣೆಗೆ ಅವಕಾಶ ನೀಡಿದ್ದೇವೆ. ರೋಗಿಗಳಿಗೆ ಉತ್ತಮ ಚಿಕಿತ್ಸೆೆ ಕೊಡಬೇಕು. ಕೆ.ಆರ್.ಆಸ್ಪತ್ರೆೆಯ ಅವ್ಯವಸ್ಥೆೆಯನ್ನು ಸರಿಪಡಿಸಿ ಬಡಜನರಿಗೆ ಅನುಕೂಲ ಕಲ್ಪಿಸಬೇಕು. ರುಚಿಯಾದ ಶುಚಿಯಾದ ಆಹಾರ ಕೊಡಬೇಕು. ಇಲ್ಲದಿದ್ದರೆ ಟೆಂಡರ್ ರದ್ದು ಮಾಡಲಾಗುವುದು ಎಂದರು.

ಆಯೋಗದ ಸದಸ್ಯರಾದ ಸುಮಂತರಾವ್, ರೋಹಿಣಿ, ವಿಜಯಲಕ್ಷ್ಮೀ, ಮೈಸೂರು ಮೆಡಿಕಲ್ ಕಾಲೇಜಿನ ಡೀನ್ ಡಾ.ದಾಕ್ಷಾಯಿಣಿ ಹಾಜರಿದ್ದರು.

ಅಮಾನತಿಗೆ ಸೂಚನೆ: ಇದೇ ವೇಳೆ ಶುಶ್ರೂಷಕರ ಮೇಲ್ವಿಚಾರಕಿ ಲೀಲಾವತಿ, ಐಎನ್‌ಯು ವಿಭಾಗದ ಲಾರೆನ್ಸ್ ಎಂಬವರ ಅಮಾನತಿಗೆ ಡಾ.ಎಚ್.ಕೃಷ್ಣ ಸೂಚನೆ ನೀಡಿದರು.