ಚನ್ನಪಟ್ಟಣ: ನಗರದ ಸಾರ್ವಜನಿಕ ಆಸ್ಪತ್ರೆ ತುರ್ತು ಚಿಕಿತ್ಸಾ ವಿಭಾಗದಲ್ಲಿರುವ ಶೌಚಗೃಹದಲ್ಲಿ ಗುರುವಾರ ಕೊಳೆತ ಸ್ಥಿತಿಯಲ್ಲಿ ಹೆಣ್ಣು ಭ್ರೂಣ ಪತ್ತೆಯಾಗಿದೆ.
ಆಸ್ಪತ್ರೆ ಪ್ರವೇಶದಲ್ಲೇ ಸಿಗುವ ಟಕದಲ್ಲಿರುವ ಶೌಚಗೃಹವನ್ನು ಹೆಚ್ಚಾಗಿ ಬಳಸುತ್ತಿರಲಿಲ್ಲ. ಶೌಚಗೃಹದಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದ ಡಿ ಗ್ರೂಪ್ ನೌಕರರು ಪರಿಶೀಲಿಸಿದಾಗ ಪತ್ತೆಯಾಗಿದೆ. ಯಾರೋ ಗರ್ಭಪಾತ ವಾಡಿಸಿರುವವರು ಎರಡು ಅಥವಾ ಮೂರು ದಿನದ ಹಿಂದೆ ಇಲ್ಲಿಗೆ ತಂದು ಹಾಕಿರಬಹುದು ಎಂದು ಶಂಕಿಸಲಾಗಿದೆ.
ಭ್ರೂಣ ಪತ್ತೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಶಿಶು ಅಭಿವೃದ್ಧಿ ಅಧಿಕಾರಿ ಎಂ.ಕೆ.ಸಿದ್ದಲಿಂಗಯ್ಯ, ನಗರ ಠಾಣೆ ಪಿಎಸ್‌ಐ ಸಿ.ಎಂ.ಹರೀಶ್ ಭೇಟಿ ನೀಡಿ ಪರಿಶೀಲಿಸಿದರು. ಸಾರ್ವಜನಿಕ ಆಸ್ಪತ್ರೆ ವತಿಯಿಂದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೈದ್ಯರು ಭ್ರೂಣದ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಹೆಚ್ಚಿನ ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ(ಎಸ್‌ಎಫ್‌ಐಎಲ್) ಕಳುಹಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ.
ಆಸ್ಪತ್ರೆಯಲ್ಲಿ ವಾರದಿಂದ ಯಾವುದೇ ಗರ್ಭಪಾತ ವಾಡಿಲ್ಲ ಎಂದು ಆಸ್ಪತ್ರೆ ಅಧೀಕ್ಷಕ ಡಾ. ವಿಜಯನರಸಿಂಹ ಸ್ಪಷ್ಟಪಡಿಸಿದ್ದು, ಹೊರಗಿನಿಂದ ಯಾರೋ ಗೊಂದಲ ಮೂಡಿಸುವ ಸಲುವಾಗಿ ತಂದು ಹಾಕಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದರು. ಯಾರೋ ತಂದು ಬಿಸಾಡಿದ್ದಾರೆ ಎನ್ನುವುದು ಆಸ್ಪತ್ರೆ ಭದ್ರತೆ ಬಗ್ಗೆ ಸಾರ್ವನಿಕರಲ್ಲಿ ಅನುವಾನ ಮೂಡಿಸಿದೆ.
ಹೆಣ್ಣು ಭ್ರೂಣ ಹತ್ಯೆಗೆ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಂಡಿದೆ. ಹೀಗಿದ್ದರೂ ಪದೇಪದೆ ಭ್ರೂಣ ಹತ್ಯೆ ಪ್ರಕರಣಗಳು ಕಂಡುಬರುತ್ತಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಈ ಪ್ರಕರಣ ಅನುವಾನಗಳಿಗೆ ಕಾರಣವಾಗಿದೆ. ಯಾರೋ ಕಿಡಿಗೇಡಿಗಳು ಈ ಭ್ರೂಣ ತಂದು ಹಾಕಿರುವರೋ ಅಥವಾ ಆಸ್ಪತ್ರೆ ಸಿಬ್ಬಂದಿ ವರ್ಗ ಏನಾದರೂ ಈ ಪ್ರಕರಣದಲ್ಲಿ ಭಾಗಿಯಾಗಿರುವರೋ ಎಂಬುದು ತನಿಖೆಯಿಂದಲೇ ಹೊರಬೀಳಬೇಕಾಗಿದೆ.