ಬೆಂಗಳೂರು: ಸ್ನಾತಕೋತ್ತರ ಪದವಿ ಪೂರೈಸಿದ ವೈದ್ಯ ವಿದ್ಯಾರ್ಥಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ 1 ವರ್ಷ ಕಡ್ಡಾಯ ಸೇವೆ ಸಲ್ಲಿಸಬೇಕೆಂದು ಸೂಚಿಸಿ ಹೊರಡಿಸಲಾಗಿರುವ ಅಧಿಸೂಚನೆ ಪ್ರಶ್ನಿಸಿದ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಡಾ.ಎಂ.ಎನ್.ಸಾಧ್ವಿನಿ ಸೇರಿ 281 ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ವೈದ್ಯರು ಸಲ್ಲಿಸಿರುವ ಮೇಲ್ಮನವಿಯನ್ನು ಗುರುವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ, ಸರ್ಕಾರ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್) ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ಅ.22ಕ್ಕೆ ವಿಚಾರಣೆ ಮುಂದೂಡಿತು.
ಅರ್ಜಿದಾರರ ಆಕ್ಷೇಪವೇನು?: ಸ್ನಾತಕೋತ್ತರ ಪದವಿ ನಂತರ ಸರ್ಕಾರಿ ಆಸ್ಪತ್ರೆಗಳಲ್ಲಿ 1 ವರ್ಷ ಸೇವೆ ಕಡ್ಡಾಯಗೊಳಿಸುವ ಕುರಿತು 2017ರಲ್ಲಿ ತಿದ್ದುಪಡಿ ಮಾಡಲಾದ "ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದವರ ಕಡ್ಡಾಯ ಸೇವೆಗಳ ತರಬೇತಿ ಕಾಯ್ದೆ - 2012"ರ ಸಿಂಧುತ್ವ ಎತ್ತಿಹಿಡಿದು 2019ರ ಆ.30ರಂದು ಏಕಸದಸ್ಯ ಪೀಠ ನೀಡಿರುವ ತೀರ್ಪನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.
ಏಕಸದಸ್ಯ ಪೀಠದ ಆದೇಶ, ಜು.23ರಂದು ಸರ್ಕಾರ ಹಾಗೂ ಆ.24ರಂದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಹೊರಡಿಸಿರುವ ಆದೇಶಗಳಿಂದಾಗಿ ಆರ್‌ಜಿಯುಎಚ್‌ಎಸ್ ಸ್ನಾತಕೋತ್ತರ ಪದವಿ ಪೂರೈಸಿದವರಿಗೆ ಪ್ರಮಾಣಪತ್ರ ವಿತರಿಸುತ್ತಿಲ್ಲ. ಕರ್ನಾಟಕ ವೈದ್ಯಕೀಯ ಪರಿಷತ್ ನೋಂದಣಿ ಮಾಡಿಕೊಳ್ಳುತ್ತಿಲ್ಲ. ವಾರ್ಷಿಕ 6ರಿಂದ 75 ಲಕ್ಷ ವರೆಗೆ ಹಣ ಪಾವತಿಸಿ ಖಾಸಗಿ, ಮ್ಯಾನೇಜ್ಮೆಂಟ್, ಎನ್‌ಆರ್‌ಐ ಕೋಟಾ ಅಡಿ ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳನ್ನು ಪಡೆದಿರುವ ನಮಗೆ ಈ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.