ಉದಯಗಿರಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಮಾಡುತ್ತಿರುವ ಹೋರಾಟವನ್ನು ಸರ್ಕಾರ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರ ಮೂಲಕ ಸರ್ಕಾರ ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ನಾವು ಕೋರ್ಟ್‌ನಲ್ಲಿ ಅನುಮತಿ ಪಡೆಯುವಂತಾಯಿತು. ಮುಸ್ಲಿಮರ ಓಲೈಕೆಗೆ ಸರ್ಕಾರ ಈ ರೀತಿ ಮಾಡುತ್ತಿದೆ. ಅವರ ಓಲೈಕೆ ಬಿಟ್ಟು ಬೇರೇನೂ ಇಲ್ಲ ಎಂದು ಕಿಡಿಕಾರಿದರು.
ಇನ್ನು ಉದಯಗಿರಿಯಲ್ಲಿ ನಡೆದಿದ್ದ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸತೀತ್‌ಎಂಬಾತನನ್ನು ಪೊಲೀಸರು ಗಡಿಪಾರು ಮಾಡಿದ್ದು, ಪ್ರಚೋದನಕಾರಿ ಭಾಷಣ ಮಾಡಿದ್ದ ಮೌಲ್ವಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಕಿಡಿಕಾರಿದರು.
ಮೈಸೂರಿನ ಉದಯಗಿರಿಯಲ್ಲಿ ಇಡೀ ರಾಜ್ಯವೆ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಖಾಕಿ ಕಂಡರೆ ದೊಡ್ಡ ದೊಡ್ಡ ನಟರು, ರಾಜಕಾರಣಿಗಳೇ ಭಯ ಪಡುತ್ತಾರೆ. ಈ ಪುಂಡ ಮುಸ್ಲಿಮರು ಕಲ್ಲು ತೂರಿದ್ದಾರೆ. ಪೊಲೀಸರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ನಾವು ಮಾಡಿದ್ದೇವೆ. ಆದರೆ ಇವರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದರು. ಭಾಷಣ ಮಾಡಿ ಪ್ರಚೋದನೆ ಮಾಡಿದ ವ್ಯಕ್ತಿಯನ್ನು ಈಗ ಬಂಧಿಸಿದ್ದಾರೆ. ಅವನನ್ನು ಕಾಪಾಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಗೃಹ ಸಚಿವರು ಬಂದು ಹೋದ ಬಳಿಕ ಯಾರನ್ನೂ ಬಂಧಿಸಿಲ್ಲ. ಪ್ರಕರಣ ಸಂಬಂಧ ಇದುವರೆಗೆ 16 ಜನರನ್ನಷ್ಟೇ ಬಂಧಿಸಲಾಗಿದೆ. ಇಡೀ ಸರ್ಕಾರ ವೋಟ್ ಬ್ಯಾಂಕ್‌ಗಾಗಿ ಇಸ್ಲಾಮೀಕರಣ ಮಾಡಲು ಹೊರಟಿದ್ದಾರೆ. ಟಿಪ್ಪು ಜಯಂತಿ ಮಾಡಿದರು, ಇದರಿಂದ ಕೊಲೆಯಾಯಿತು. ಈಗ ಪ್ರಾರ್ಥನೆ ಮಾಡಲು ಸಮಯ ಕೊಡುತ್ತಿದ್ದಾರೆ. ಇಸ್ಲಾಂ ಅಂದ್ರೆ ಸಿದ್ದರಾಮಯ್ಯ ದೆವ್ವ ಬಂದ ರೀತಿ ಆಡುತ್ತಾರೆ ಎಂದು ಕುಟುಕಿದರು.
ಭಯೋತ್ಪಾದಕ ಪುಂಡ ಮುಸ್ಲಿಮರು ಮಚ್ಚು, ಲಾಂಗು ಹಿಡಿದುಕೊಂಡು ಓಡಾಡುತ್ತಿದ್ದಾರೆ. ನಮ್ಮದೆ ಸರ್ಕಾರ ಇದೆ, ಏನು ಮಾಡಲ್ಲ ಅಂತ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಹಿಂದು ಸಂಘಟನೆಗಳಿಗೆ ಬಿಜೆಪಿ ಬೆಂಬಲ ಕೊಡುತ್ತದೆ. ಈ ಹೋರಾಟ ಮುಂದುವರೆಸುತ್ತೇವೆ ಎಂದರು.
ಕಿಡಿಗೇಡಿಗಳನ್ನು ಶಾಂತಿ ದೂತರು ಎನ್ನುತ್ತಾರೆ. ಇವರು ಶಾಂತಿ ದೂತರಾಗಿದ್ದರೆ ಕಲ್ಲು ಏಕೆ ಹೊಡೆಯುತ್ತಿದ್ದರು? ಪೊಲೀಸ್ ಠಾಣೆಗೆ ಕಲ್ಲು ಹೊಡೆಯುವವರು ಇವರು ಶಾಂತಿದೂತರಾ? ಎಂದು ಪ್ರಶ್ನಿಸಿದರು.