ಹನೂರಿನಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಅಂಗವಿಕಲ ಫಲಾನುಭವಿಗಳಿಗೆ ದ್ವಿಚಕ್ರ ವಾಹನವನ್ನು ವಿತರಿಸಿದರು. ಮೀನಾಕ್ಷಿ, ಕವಿರತ್ನ, ಮಂಜೇಶ್ ಇತರರು ಇದ್ದರು. 
ನ್ಯೂಸ್

ಸರ್ಕಾರದ ಸವಲತ್ತು ಅಂಗವಿಕಲರಿಗೆ ನೆರವು

ಹನೂರು: ಅಂಗವಿಕಲರು ಬದುಕಿನಲ್ಲಿ ಹೊಸ ಚೈತನ್ಯದೊಂದಿಗೆ ಕ್ರಿಯಾಶೀಲರಾಗಲು ಹಾಗೂ ಚಟುವಟಿಕೆಯಲ್ಲಿ ಭಾಗಿಯಾಗಲು ದ್ವಿಚಕ್ರ ವಾಹನ ಸಹಕಾರಿಯಾಗಲಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿಗೃಹದ ಆವರಣದಲ್ಲಿ ಶುಕ್ರವಾರ ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 23 ಫಲಾನುಭವಿಗಳಿಗೆ ದ್ವಿಚಕ್ರ ವಾಹನವನ್ನು ವಿತರಿಸಿ ಮಾತನಾಡಿದರು.

ಅಂಗವಿಕಲರು ಎಲ್ಲರಂತೆ ಸಮಾನ ಮನಸ್ಕರು. ತಮ್ಮದೇ ಆದ ಪ್ರತಿಭೆ ಹೊಂದಿರುತ್ತಾರೆ. ಆದರೆ ಸಮಾಜದಲ್ಲಿ ಕೆಲವರು ತಿರಸ್ಕಾರ ಭಾವನೆಯಿಂದ ಕಾಣುವುದರಿಂದ ಮಾನಸಿಕವಾಗಿ ಯಾತನೆಯನ್ನು ಅನುಭವಿಸುತ್ತಿರುತ್ತಾರೆ. ಆದ್ದರಿಂದ ಇವರಿಗೆ ಉತ್ತೇಜನ ನೀಡುವುದರ ಮೂಲಕ ಪೊ್ರೀೀತ್ಸಾಹ ನೀಡುವುದು ಅತ್ಯಗತ್ಯವಾಗಿದೆ. ಈ ಮೂಲಕ ಸಮಾಜದ ಮುಖ್ಯವಾಹಿನಿಗೆ ಕರೆತರಬೇಕಿದೆ. ಹಾಗಾಗಿ ಇವರ ಸಬಲೀಕರಣಕ್ಕಾಗಿ ಸರ್ಕಾರ ಹಲವು ಸವಲತ್ತುಗಳನ್ನು ಒದಗಿಸುತ್ತಿದೆ. ಈ ದಿಸೆಯಲ್ಲಿ ದ್ವಿಚಕ್ರ ವಾಹನವನ್ನು ನೀಡುತ್ತಿರುವುದು ತುಂಬ ಅನುಕೂಲವಾಗಿದೆ. ಇದರಿಂದ ಜೀವನದಲ್ಲಿ ಉತ್ಸುಕತೆ ಹೊಂದಲು ಸಹಕಾರಿಯಾಗಿದೆ ಎಂದರು.

ಸರ್ಕಾರ ಇಂತಹ ಯೋಜನೆಯನ್ನು ರೂಪಿಸಿರುವುದು ಅರ್ಥಪೂರ್ಣವಾಗಿದ್ದು, ಸಂತಸ ತಂದಿದೆ. ಆದ್ದರಿಂದ ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಇನ್ನಷ್ಟು ಸವಲತ್ತುಗಳು ಅಂಗವಿಕಲರಿಗೆ ದೊರಕುವಂತೆ ಯೋಜನೆಯನ್ನು ರೂಪಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಮೀನಾಕ್ಷಿ, ನೌಕರರಾದ ಕವಿರತ್ನ, ಜಯಶಂಕರಿ, ಮುಖಂಡರಾದ ಮಂಜೇಶ್, ಮಹದೇವ, ವೆಂಕಟೇಶ್, ನಾಗರಾಜು, ಸಿದ್ದರಾಜು, ಮಹೇಶ್ ಹಾಗೂ ಇನ್ನಿತರರು ಇದ್ದರು.