ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಮಾವು ಬೆಳೆಗಾರರು ಸರ್ಕಾರದ ಬೆಂಬಲ ಬೆಲೆಯ ನಿರೀಕ್ಷೆಯಲ್ಲಿ ಕಾದುನೋಡುವಂತಾಗಿದ್ದು, ಮಾವನ್ನು ಕಟಾವು ಮಾಡದೆ ತೋಟಗಳಲ್ಲಿಯೇ ಬಿಟ್ಟಿದ್ದು, ಕಟಾವಿಗೆ ಬಂದಿರುವ ಮಾವು ಮರಗಳಲ್ಲಿಯೇ ಕೊಳೆತು ಮಚ್ಚೆ ರೋಗ ಕಾಣಿಸಿಕೊಳ್ಳುವಂತಾಗಿದೆ.
ಕಳೆದ ಬುಧವಾರ ಮಾವಿಗೆ ಬೆಂಬಲ ನೀಡಬೇಕೆಂದು ಒತ್ತಾಯಿಸಿ ಮಾವು ಬೆಳೆಗಾರರು ಶ್ರೀನಿವಾಸಪುರ ಪಟ್ಟಣವನ್ನು ಬಂದ್ ಮಾಡಿ, ಬೆಂಬಲ ಬೆಲೆಗೆ ಆಗ್ರಹಿಸಿದ್ದು, ಜಿಲ್ಲಾಧಿಕಾರಿ ಎಂ.ಆರ್.ರವಿ ಭೇಟಿ ನೀಡಿ, ಬೆಂಬಲ ಬೆಲೆಗಾಗಿ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ನಿಯೋಗ ಕೋಂಡೊಯ್ಯುವುದಾಗಿ ಭರವಸೆ ನೀಡಿ, ಬಂದ್ ಕೈಬಿಡುವಂತೆ ರೈತರ ಮನವೊಲಿಸಿದರು.
ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ರವರ ಬಳಿ ಜಿಲ್ಲಾಧಿಕಾರಿ ರೈತರ ನಿಯೋಗ ಕೊಂಡೊಯ್ದ ಸಂದರ್ಭದಲ್ಲಿ ಸಚಿವರ ಬಳಿ ರೈತರ ನಿಯೋಗ ಮಾವು ಬೆಳೆಗಾರರ ಸಂಕಷ್ಟಗಳನ್ನು ತೋಡಿಕೊಂಡರು. ಕನಿಷ್ಟ ಮಾವಿಗೆ ಕೆ.ಜಿ.ಯೊಂದಕ್ಕೆ ೧೫ ರೂ.ಗಳು ನೀಡಬೇಕೆಂದು ಸಚಿವರ ಬಳಿ ಒತ್ತಾಯಪಡಿಸಿದರು.
ರೈತರ ಮನವಿಯನ್ನು ಆಲಿಸಿದ ಸಚಿವ ಬೈರತಿ ಸುರೇಶ್ ಮುಖ್ಯಮಂತ್ರಿಗಳಿಗೆ ತಮ್ಮ ಮನವಿಯನ್ನು ತಲುಪಿಸುವುದಾಗಿ ಹಾಗೂ ಬೆಂಬಲ ಬೆಲೆ ಕೊಡಿಸುವ ಭರವಸೆಯನ್ನು ನೀಡಿದ್ದರು. ಜಿಲ್ಲಾಧಿಕಾರಿಗಳು ಜಿಲ್ಲೆಯ ಪರಿಸ್ಥಿತಿಯನ್ನು ಮುಖ್ಯಮಂತ್ರಿಗಳಿಗೆ ಮನವಿ ಮೂಲಕ ವಿವರಿಸಿ ಬೆಂಬಲ ನೀಡಿ ಪ್ರಸ್ತಾವನೆಯನ್ನು ಸಲ್ಲಿಸಿದ್ದರು.
ಆದರೆ ೪ ದಿನಗಳು ಕಳೆದರೂ ಇದುವರೆವಿಗೂ ಸರ್ಕಾರದಿಂದ ಯಾವುದೇ ಸೂಚನೆ ಹೊರಬಿದ್ದಿಲ್ಲ. ರೈತರು ಸರ್ಕಾರವನ್ನು ನಂಬಿ ಬೆಂಬಲ ಬೆಲೆ ಸಿಗುತ್ತದೆಂದು ಮರಗಳಲ್ಲಿ ಮಾವಿನಕಾಯನ್ನು ಕೀಳದೆ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಈಗಾಗಲೇ ಮಾವಿನಕಾಯಿ ಮರಗಳಲ್ಲಿ ಹಣ್ಣಾಗಿ ಉದುರತೊಡಗಿದೆ.
ಮತ್ತೊಂದು ಕಡೆ ಮಚ್ಚೆರೋಗ ಕಾಣಿಸಿಕೊಂಡು ಕಾಯಿ ಮರಗಳಲ್ಲಿಯೇ ಕೊಳೆಯುವಂತಾಗಿದೆ. ಪಕ್ಕದ ಆಂಧ್ರಪ್ರದೇಶದಲ್ಲಿ ರೈತರ ಒಂದು ಕೂಗಿಗೆ ಬೆಂಬಲ ಬೆಲೆ ನೀಡಿ, ರೈತರ ನೆರವಿಗೆ ಸರ್ಕಾರ ಬಂದಿದೆ. ನಮ್ಮ ಸರ್ಕಾರ ರೈತರ ಪರ, ಬಡವರ ಪರ ಎಂದು ರೈತರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಬೆಂಬಲ ಬೆಲೆ ನೀಡುತ್ತೇವೆಂದು ಕಣ್ಣು ಒರೆಸುವ ತಂತ್ರ ಮಾಡುತ್ತಾ ದಿನ ಕಳೆಯುತ್ತಿದೆ. ಇದರಿಂದ ಮರಗಳಲ್ಲಿಯೇ ಮಾವು ಕೊಳೆಯುವಂತಾಗಿದೆ ಎಂದು ರೈತರು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.
ಮಾವು ಬೆಲೆ ಕುಸಿಯಲು ಕಾರಣ :
ಈ ವರ್ಷ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಏಕಕಾಲದಲ್ಲಿ ಮಾವು ಫಸಲಿಗೆ ಬಂದಿದೆ. ಪ್ರತಿವರ್ಷ ಕರ್ನಾಟಕ ಮಾವು ಮುಗಿದ ನಂತರ ಆಂಧ್ರಪ್ರದೇಶದ ಮಾವು ಮಾರುಕಟ್ಟೆಗೆ ಬರುತ್ತಿತ್ತು. ಆಗ ಆಂಧ್ರಪ್ರದೇಶದ ಜ್ಯೂಸ್ ಮತ್ತು ಫಲ್ಫ್ ಫ್ಯಾಕ್ಟರಿಗಳವರು ಕರ್ನಾಟಕ ಮಾವನ್ನು ಖರೀದಿಸುತ್ತಿದ್ದರು. ಈ ವರ್ಷ ಒಂದೇ ಬಾರಿ ಬಂದಿರುವ ಕಾರಣ ಆಂಧ್ರಪ್ರದೇಶದ ಮಾವಿಗೆ ಬೆಂಬಲ ಬೆಲೆ ನೀಡಿರುವುದು ಮತ್ತು ಕರ್ನಾಟಕ ಮಾವನ್ನು ನಿಷೇಧ ಮಾಡಿರುವುದು ಒಂದು ಕಾರಣವಾಗಿದೆ.
ಕಳೆದ ವರ್ಷದ ತಿರುಳು ಫ್ಯಾಕ್ಟರಿಗಳಲ್ಲಿಯೇ ದಾಸ್ತಾನಾಗಿ ಉಳಿದಿದೆ :
ಜ್ಯೂಸ್ ಫ್ಯಾಕ್ಟರಿಗಳಲ್ಲಿ ಮತ್ತು ತಿರುಳು ತೆಗೆಯುವ ಕಾರ್ಖಾನೆಗಳಲ್ಲಿ ಕಳೆದ ವರ್ಷದ ಮಾವಿನ ತಿರುಳು ಫ್ಯಾಕ್ಟರಿಗಳಲ್ಲಿ ಸ್ಟಾಕ್ ಇರುವುದರಿಂದ ಈ ವರ್ಷ ಹೆಚ್ಚಾಗಿ ಮಾವು ಖರೀದಿಸಲು ರಾಜ್ಯ ಸೇರಿದಂತೆ ಹೊರ ರಾಜ್ಯಗಳ ಫ್ಯಾಕ್ಟರಿಗಳವರು ಹೆಚ್ಚಾಗಿ ಮಾವನ್ನು ಖರೀದಿ ಮಾಡುತ್ತಿಲ್ಲ. ಸರ್ಕಾರಗಳು ರೈತರ ನೆರವಿಗೆ ಧಾವಿಸಿದಂತೆ ಫ್ಯಾಕ್ಟರಿಗಳವರ ಕಷ್ಟಸುಖವನ್ನು ಆಲಿಸಬೇಕು. ಹಾಗೂ ಅಲ್ಲಿನ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಸರ್ಕಾರ ಬೆಂಬಲ ಬೆಲೆ ನೀಡಬೇಕು ಎಂಬುದು ಅವರ ಒತ್ತಾಯವೂ ಆಗಿದೆ.
ಬಾಕ್ಸ್
ಸೋಮವಾರ ಸಂಜೆ ತನಕ ಸರ್ಕಾರದ ಬೆಂಬಲ ಬೆಲೆ ಘೋಷಣೆಗಾಗಿ ಕಾಯುತ್ತೇವೆ. ನಂತರ ರೈತರ ಹೋರಾಟ ಚುರುಕುಗೊಳ್ಳುತ್ತದೆ. ಕಳೆದ ೫ ದಿನಗಳಿಂದ ರೈತರನ್ನು ಸರ್ಕಾರ ಯಾಮಾರಿಸುತ್ತಿದೆ. ರೈತರ ತಾಳ್ಮೆಯನ್ನು ಸರ್ಕಾರ ಪರೀಕ್ಷಿಸುತ್ತಿದೆ. ಶೇ.೯೦ ರಷ್ಟು ಫಸಲು ಮರಗಳಲ್ಲಿಯೇ ಇದೆ. ಹೀಗೆಯೇ ಮುಂದುವರೆದರೆ ರೈತರ ಸಾವುನೋವುಗಳನ್ನು ಸರ್ಕಾರವೇ ನೋಡಬೇಕಾಗುತ್ತದೆ ಎಂದು ರೈತರು ಸರ್ಕಾರಕ್ಕೆ ಹೆಚ್ಚರಿಕೆ ನೀಡಿದ್ದಾರೆ.
ಕೋಟ್
ಶ್ರೀನಿವಾಸಪುರ ತಾಲ್ಲೂಕಿನಲ್ಲಿ ರೈತರು ೧೫ ದಿನಗಳಿಂದ ಬೆಂಬಲ ಬೆಲೆಗಾಗಿ ನಿರಂತರ ಹೋರಾಟಗಳನ್ನು ಮಾಡುತ್ತಿದ್ದಾರೆ. ಬೆಂಬಲ ಬೆಲೆ ನೀಡುತ್ತೇವೆಂದು ಸರ್ಕಾರ ರೈತರನ್ನು ಯಾಮಾರಿಸುತ್ತಿದೆ. ಇದರಿಂದ ತೋತಾಪುರಿ ಮಾವು ಮರಗಳಲ್ಲಿಯೇ ಉದುರುವಂತಾಗಿದೆ. ರೈತರು ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಸರ್ಕಾರದ ಬೆಂಬಲ ಬೆಲೆಗಾಗಿ ಕಾದು ನೋಡುವಂತಹ ಪರಿಸ್ಥಿತಿ ಉಂಟಾಗಿದೆ. ಕೂಡಲೇ ಸರ್ಕಾರ ಟನ್ನಿಗೆ ೧೫ ಸಾವಿರ ರೂ.ಗಳು ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ಒತ್ತಾಯ.
-ಚಿನ್ನಪ್ಪರೆಡ್ಡಿ, ಅಧ್ಯಕ್ಷರು, ಕೋಲಾರ ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘ.
ಚಿತ್ರ ೧೫ ಕೆ.ಎಲ್.ಆರ್. ೦೨ : ಮಾವಿಗೆ ಬೆಲೆ ಇಲ್ಲದೆ ಮರಗಳಲ್ಲಿಯೇ ಹಣ್ಣಾಗತೊಡಗುತ್ತಿರುವುದು.
ಚಿತ್ರ ೧೫ ಕೆ.ಎಲ್.ಆರ್. ೦೨ಎ : ತೋತಾಪುರಿ ಮಾವಿನಲ್ಲಿ ಮಚ್ಚೆ ರೋಗ ಕಾಣಿಸಿಕೊಳ್ಳುತ್ತಿರುವುದು.
ಚಿತ್ರ ೧೫ ಕೆ.ಎಲ್.ಆರ್. ೦೨ಬಿ : ಚಿನ್ನಪ್ಪರೆಡ್ಡಿ ಭಾವಚಿತ್ರ