ಮೂಡಿಗೆರೆ: ತಾಲೂಕಿನ ನಿಡುವಾಳೆ ಗ್ರಾಮದ ಮುಖ್ಯ ರಸ್ತೆಯಲ್ಲಿ ವಿಪರಿತ ಗುಂಡಿಯಾಗಿರುವ ಬಗ್ಗೆ ಯಮ ಮತ್ತು ಚಿತ್ರಗುಪ್ತರ ವೇಷದಲ್ಲಿ ಗ್ರಾಪಂ ಉಪಾಧ್ಯಕ್ಷ ನವೀನ್ ಹಾವಳಿ ಹಾಗೂ ಹಾಸ್ಯ ಕಲಾವಿದ ರಮೇಶ್ ಯಾದವ್ ವಾಹನ ಸವಾರರಿಗೆ ಜಾಗೃತಿ ಮೂಡಿಸುವ ಜತೆಗೆ ರಸ್ತೆ ಅಭಿವೃದ್ಧಿಪಡಿಸುವಂತೆ ಸರ್ಕಾರದ ಗಮನ ಸೆಳೆದರು.
ಗುಂಡಿಯನ್ನು ತಪ್ಪಿಸುತ್ತಾ ಅಡ್ಡಾದಿಡಿಯಾಗಿ ಸಂಚರಿಸುತ್ತಿದ್ದ ವಾಹನವನ್ನು ತಡೆದ ಯಮ ಮತ್ತು ಚಿತ್ರಗುಪ್ತರು ರಸ್ತೆಯಲ್ಲಿ ಉಂಟಾಗಿರುವ ವಿಪರೀತ ಗುಂಡಿಯಲ್ಲಿ ವಾಹನ ಸಂಚರಿಸುವ ಬಗ್ಗೆ ಕೇಳಿ ತಿಳಿದುಕೊಂಡರು. ನಿರಂತರ ಮಳೆಯಿಂದ ಗ್ರಾಮೀಣ ರಸ್ತೆಗಳಲ್ಲಿ ಸಂಪೂರ್ಣ ಗುಂಡಿಯಾಗಿದೆ. ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಇದರ ವಿರುದ್ಧ ಸರ್ಕಾರ ಮತ್ತು ಜನಪ್ರತಿನಿಧಿಗಳ ಗಮನ ಸೆಳೆಯಲು ನವೀನ್ ಹಾವಳಿ ಹಾಗೂ ರಮೇಶ್ ಯಾದವ್ ಅವರು ಯಮ ಹಾಗೂ ಚಿತ್ರಗುಪ್ತನ ವೇಷಧರಿಸಿ ರಸ್ತೆಗೆ ಇಳಿದಿದ್ದು ವಿಶೇಷವಾಗಿತ್ತು.
ನಿಡುವಾಳೆ ಗ್ರಾಮದ ಸುತ್ತಮುತ್ತ ರಸ್ತೆಗಳಲ್ಲಿ ಯಮ ಮತ್ತು ಚಿತ್ರಗುಪ್ತರು ತಿರುಗಾಡುತ್ತಾ ಗುಂಡಿಗಳ ಬಗ್ಗೆ ಸರ್ಕಾರದ ಗಮನ ಸೆಳೆದರು. ಪ್ರತಿಯೊಂದು ಗುಂಡಿಗಳ ಅಳತೆಯನ್ನು ದಾಖಲು ಮಾಡಿಕೊಂಡರು. ಪಾಪ-ಪುಣ್ಯಗಳ ಬಗ್ಗೆ ಲೆಕ್ಕ ಬರೆದುಕೊಂಡರು. ಗುಂಡಿಯಾದ ರಸ್ತೆಯಲ್ಲಿ ನಿಜವಾದ ಯಮ ಮತ್ತು ಚಿತ್ರಗುಪ್ತ ನಿರಂತರವಾಗಿ ಕಾದು ಕುಳಿತಿರುತ್ತಾರೆ. ಹದಗೆಟ್ಟ ರಸ್ತೆಯಲ್ಲಿ ನಿಧಾನವಾಗಿ ವಾಹನಗಳು ಸಾಗಬೇಕು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ಬೈಕ್ ಸವಾರರು ಹೆಲ್ಮೆಟ್ ಧರಿಸಬೇಕು. 4 ಚಕ್ರದ ವಾಹನ ಸವಾರರು ಸೀಟ್ ಬೆಲ್ಟ್ ಧರಿಸುವಂತೆ ಯಮ ಮತ್ತು ಚಿತ್ರಗುಪ್ತರ ವೇಷದಲ್ಲಿದ್ದ ನವೀನ್ ಹಾವಳಿ ಮತ್ತು ರಮೇಶ್ ಯಾದವ್ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.