ನ್ಯೂಸ್

ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಮಂಗಳೂರು- ಕಾರ್ಕಳದ ನಡುವೆ ನಾಲ್ಕು ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ದಿನದಲ್ಲಿ ಐದು ಸಿಂಗಲ್ ಟ್ರಿಪ್‌ಗಳಿಗೆ ಹೊಸದಾಗಿ ಪರ್ಮಿಟ್ ನೀಡಲಾಗಿರುವ ಕ್ರಮ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಈ ಸಂಬಂಧ ಖಾಸಗಿ ಬಸ್ ಮಾಲೀಕರಾದ ಉಡುಪಿ ಜಿಲ್ಲೆ ಕಾಪು ನಿವಾಸಿ ವಿಜಯಾ ಎಚ್. ತಂತ್ರಿ ಹಾಗೂ ಇತರರು ಸಲ್ಲಿಸಿದ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್‌ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿ ಸಂಬಂಧ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ, ದಕ್ಷಿಣ ಕನ್ನಡ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿತು. ಹೊಸ ಪರ್ಮಿಟ್ ನೀಡುವ ಮೊದಲು ‘ನೂತನ ಸಮಗ್ರ ಏರಿಯಾ ಯೋಜನೆ-2019ರ’ ಅನ್ವಯ ಸಾರಿಗೆ ಬೇಡಿಕೆ ಕುರಿತು ಜಂಟಿ ಸಮೀಕ್ಷೆ ನಡೆಸಲಾಗಿದೆಯೇ ಎಂಬ ಬಗ್ಗೆ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು ಏ.21ಕ್ಕೆ ಮುಂದೂಡಿತು.

ಅರ್ಜಿಯಲ್ಲಿ ಏನಿದೆ?

ಮಂಗಳೂರು- ಕಾರ್ಕಳದ ನಡುವೆ ನಾಲ್ಕು ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ದಿನದಲ್ಲಿ ಐದು ಸಿಂಗಲ್ ಟ್ರಿಪ್‌ಗಳಿಗೆ ಹೊಸದಾಗಿ ಪರ್ಮಿಟ್ ಮಂಜೂರು ಮಾಡಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು 2025ರ ಮಾ. 17ರಂದು ಅಧಿಸೂಚನೆ ಹೊರಡಿಸಿದ್ದರು. ಈ ಅಧಿಸೂಚನೆಯು ‘ನೂತನ ಸಮಗ್ರ ಏರಿಯಾ ಯೋಜನೆ-2019’ಕ್ಕೆ ತದ್ವಿರುದ್ಧವಾಗಿದ್ದು, ಖಾಸಗಿ ಬಸ್ ಮಾಲೀಕರ ವಾದವನ್ನು ಆಲಿಸದೇ ಏಕಪಕ್ಷೀಯವಾಗಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.