ಮೂಡಿಗೆರೆ: ಭಾರಿ ಮಳೆಯಿಂದ ಮಲೆನಾಡು ಭಾಗದಲ್ಲಿ ಕಾಫಿ, ಕಾಳುಮೆಣಸು, ಅಡಕೆ ಮತ್ತಿತರ ಬೆಳೆಗಳು ನಾಶವಾಗಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನಿಧಿಯಿಂದ ಬೆಳೆಗಾರರಿಗೆ ಪರಿಹಾರ ಒದಗಿಸಬೇಕು ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಒತ್ತಾಯಿಸಿದರು.
ಕಳೆದ 6 ತಿಂಗಳಿನಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಕಾಫಿ, ಕಾಳುಮೆಣಸು, ಅಡಕೆ ಬೆಳೆ ಶಿಲೀಂಧ್ರ ರೋಗಕ್ಕೆ ತುತ್ತಾಗಿದೆ. ಫಸಲಿಗೆ ಬಂದ ಬೆಳೆ ರೈತರ ಕೈಗೆಟುಕದಂತಾಗಿದೆ. ಬೆಳೆಗಾರರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಕಾಫಿ ಮಂಡಳಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆದಿದೆ. ಸಮೀಕ್ಷೆ ನಡೆಸಿದ ವರದಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಇಲಾಖೆಯಿಂದ ಪಡೆದುಕೊಂಡು ಶೀಘ್ರ ಪರಿಹಾರ ನೀಡಲು ಮುಂದಾಗಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಿ.ಎಸ್.ಜಯರಾಮ್ ಮಾತನಾಡಿ, ಸರ್ಫೇಸಿ ಕಾಯ್ದೆಯಡಿ ದೇಶದಲ್ಲಿ 28 ಸಾವಿರ ರೈತರು ಸಿಲುಕಿದ್ದಾರೆ. ಅದರಲ್ಲಿ ಹೆಚ್ಚಾಗಿ ರಾಜ್ಯದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಿರಂತರ ಮಳೆಯಿಂದಾಗಿ ಬೆಳೆ ಕಳೆದುಕೊಂಡು ಸರ್ಫೇಸಿ ಕಾಯ್ದೆಗೊಳಪಟ್ಟ ರೈತರು ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಶಾಸಕರು ಹಾಗೂ ಸಂಸದರು ಸಭೆ ಸೇರಿ ಚರ್ಚಿಸಿ ರೈತರ ನೆರವಿಗೆ ಮುಂದಾಗಿದ್ದಾರೆ. ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಪರಿಹಾರದ ಹಣ ರೈತರಿಗೆ ಸಿಗುವಂತೆ ಮಾಡಬೇಕು. ಚಿಕ್ಕಮಗಳೂರು ಜಿಲ್ಲೆಯನ್ನು ಅತಿವೃಷ್ಟಿ ಪ್ರದೇಶವೆಂದು ಘೋಷಿಸಲು ಶಾಸಕರು ಹಾಗೂ ಸಂಸದರು ಸರ್ಕಾರದ ಗಮನ ಸೆಳೆಯಬೇಕು ಎಂದು ಒತ್ತಾಯಿಸಿದರು.