ನ್ಯೂಸ್

ಸರ್ಕಾರ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಲಿ

ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವತ್ತ ಇಂದಿನಿಂದಲೇ ಗಮನ ನೀಡಿ ಎಂದು ಪರಿಸರವಾದಿ ವಸಂತಕುಮಾರ್ ಮೈಸೂರುಮಠ್ ಕರೆ ನೀಡಿದರು.

ನಗರದ ವಿ.ವಿ.ಮೊಹಲ್ಲಾದ ಮಾತೃಮಂಡಳಿ ವಿದ್ಯಾಸಂಸ್ಥೆಯಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗಲು ಸಾವಿರಾರು ವರ್ಷಗಳು ಬೇಕಾಗುತ್ತದೆ. ಇದರಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಹೀಗಾಗಿ ಪ್ಲಾಸ್ಟಿಕ್ ತ್ಯಜಿಸಿ, ಕಾಗದ ಹಾಗೂ ಬಟ್ಟೆಯ ಬ್ಯಾಗ್‌ಗಳನ್ನು ಬಳಸಿ ಎಂದು ಸಲಹೆ ಮಾಡಿದರು.

ಸರ್ಕಾರ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಇಲ್ಲವೇ ಹಂತ ಹಂತವಾಗಿ ಕಡಿಮೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಇಂದಿನಿಂದಲೇ ಪ್ರತಿ ವಿದ್ಯಾರ್ಥಿಯು 10 ಪ್ಲಾಸ್ಟಿಕ್ ತುಂಡುಗಳನ್ನು ಸಂಗ್ರಹಿಸಿ ಶಾಲೆಯಲ್ಲಿಡಬೇಕು. ಒಂದು ತಿಂಗಳ ನಂತರ ಅದನ್ನು ನಗರಪಾಲಿಕೆ ಅಧಿಕಾರಿಗಳನ್ನು ಕರೆಸಿ, ಹಸ್ತಾಂತರಿಸಬೇಕು. ಆ ಮೂಲಕ ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸಬೇಕು ಎಂದರು.

83 ವರ್ಷದ ಮೈಸೂರುಮಠ್ ಅವರು ಎಚ್. ಡುಂಡಿರಾಜ್ ಅವರ ಪರಿಸರ ಗೀತೆಯನ್ನು ಹಾಡಿ, ಮಕ್ಕಳಿಂದಲೂ ಹೇಳಿಸಿ, ಕೊನೆಗೆ ಪರಿಸರ ಕಾಪಾಡುವ ಪ್ರತಿಜ್ಞೆ ಮಾಡಿಸಿದರು. ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಪರಿಸರ ಸಮತೋಲನ ಮುಖ್ಯ. ಪರಿಸರ ಉಳಿದರೆ ಕಾಡು- ನಾಡು ಉಳಿಯುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾತೃಮಂಡಳಿ ವಿದ್ಯಾಸಂಸ್ಥೆ ಅಧ್ಯಕ್ಷೆ ವಿಜಯಲಕ್ಷ್ಮೀ ಅರಸ್ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲು 90 ವರ್ಷಗಳ ಹಿಂದೆ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಮುಂದಿನ ಜುಲೈ ಅಥವಾ ಆಗಸ್ಟ್‌ನಲ್ಲಿ 90ನೇ ವರ್ಷಾಚರಣೆ ಏರ್ಪಡಿಸಲಾಗುತ್ತದೆ. ಅಕ್ಷರ ವಂಚಿತ ಪಾಲಕರ ಮಕ್ಕಳು ಇಲ್ಲಿ ಕಲಿತು ಉನ್ನತ ಶ್ರೇಣಿಯಲ್ಲಿ ಪಾಸಾಗುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಂಸ್ಥೆಯ ಸಹಾಯಕ ಕಾರ್ಯದರ್ಶಿ ಹೇಮಾ ಬಾಲಚಂದ್ರನ್ ಮಾತನಾಡಿ, ಚಾಕೋಲೇಟ್ ತಿನ್ನುವ ಮಕ್ಕಳು ಅದರ ಪ್ಲಾಸ್ಟಿಕ್ ಕವರನ್ನು ಎಲ್ಲೆಂದರಲ್ಲಿ ಎಸೆಯಬಾರದು. ಅಲ್ಲಿಂದಲೇ ಪ್ಲಾಸ್ಟಿಕ್ ವಿರುದ್ಧದ ಜಾಗೃತಿಯ ಕೆಲಸ ಆಗಬೇಕು ಎಂದರು.

ಪ್ರೌಢಶಾಲೆ ಮುಖ್ಯಶಿಕ್ಷಕಿ ಅನಿತಾ ಸ್ವಾಗತಿಸಿದರು. ಪಿಯು ಕಾಲೇಜು ಪ್ರಾಂಶುಪಾಲೆ ಗಿರಿಜಮ್ಮ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಸುಮಿತ್ರಾ ಇತರರಿದ್ದರು.