ವಿಜಯವಾಣಿ ಸುದ್ದಿಜಾಲ ಕೋಲಾರ
ಹಾಸ್ಟೆಲ್ ನಲ್ಲಿ ಓದುವ ಮಕ್ಕಳು, ಆರ್ಥಿಕವಾಗಿ ಹಿಂದುಳಿದ ಹಾಗು ಬಡವರ ಮಕ್ಕಳು. ಅವರ ಶಿಕ್ಷಣಕ್ಕಾಗಿ ಸರ್ಕಾರವು ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದಾರೆ. ಅವರಿಗೆ ಸೌಲಭ್ಯ ಕೊಡಕ್ಕೆ ಯೋಗ್ಯತೆ ಇಲ್ಲದ ಸಿಬ್ಬಂದಿಗಳನ್ನು ಬೇರೆ ಕಡೆಗೆ ವರ್ಗಾವಣೆ ಮಾಡುವಂತೆ ಶಾಸಕ ಕೊತ್ತೂರು ಮಂಜುನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಸಮಾಜ ಕಲ್ಯಾಣ, ಹಿಂದುಳಿದ, ಹಾಗೂ ಅಲ್ಪಸಂಖ್ಯಾತರ ಇಲಾಖೆಗಳ ಹಾಸ್ಟೆಲ್ ವಾರ್ಡನ್ ಗಳ ಸಭೆಯಲ್ಲಿ ಮಾತನಾಡಿ, ಹಾಸ್ಟೆಲ್‌ಗಳಿಗೆ ಆಹಾರ ಪೂರೈಕೆ ಮಾಡುವುದೇ ದೊಡ್ಡ ಮಾಫಿಯಾ ಆಗಿಬಿಟ್ಟಿದೆ. ಗುಣಮಟ್ಟದ ಆಹಾರ ಕೊಡಬೇಕಾದ ಗುತ್ತಿಗೆದಾರರು ಏನು ಮಾಡತ್ತಾರೆ. ಎಲ್ಲವೂ ನನಗೆ ಗೊತ್ತಿದೆ. ಇದು ಇಲ್ಲಿಗೆ ನಿಲ್ಲಬೇಕು, ಮುಂದೆ ನಡೆಯಬಾರದು. ಇದನ್ನು ವಾರ್ನಿಂಗ್ ಅಂತ ಆದರೂ ತಿಳಿದುಕೊಳ್ಳಲಿ, ಅಥವಾ ಮನವಿ ಅಂತ ಆದರೂ ತಿಳಿದುಕೊಳ್ಳಿ. ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಅನುದಾನ ಕೊಟ್ಟಿದೆ. ಹಾಸ್ಟೆಲ್ ಮೇಲುಸ್ತುವಾರಿ ವಹಿಸಿಕೊಂಡ ಅಧಿಕಾರಿಗಳು ಗುತ್ತಿಗೆದಾರರ ಹಣದಾಹಕ್ಕೆ ಬಿದ್ದು, ವಿದ್ಯಾರ್ಥಿಗಳನ್ನು ಉಪವಾಸ ಇಡುತ್ತಿದ್ದೀರಿ. ಇದರಿಂದ ವಿದ್ಯಾರ್ಥಿಗಳು ಸೊರಗುತ್ತಿದ್ದಾರೆ. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡಿದೆ ಹೋದರೆ ಮುಂದೆ ಪರಿಣಾಮ ಸರಿ ಇರಲ್ಲ ಎಂದು ಎಚ್ಚರಿಕೆ ನೀಡಿದರು.
ಹಾಸ್ಟೆಲ್ ಮಕ್ಕಳಿಗೆ ಆಹಾರ ಸರಬರಾಜು ಮಾಡುವ ಸಂದರ್ಭದಲ್ಲಿ ಸ್ಥಳದಲ್ಲಿಯೇ ಪರೀಕ್ಷೆ ಮಾಡಿಕೊಳ್ಳಿ, ಗುಣಮಟ್ಟ ಇದ್ದರೆ ನೋಡಿ, ಇಲ್ಲದೇ ಹೋದರೆ ವಾಪಸ್ಸು ಕಳಸಿ, ಮಕ್ಕಳ ಶಿಕ್ಷಣದ ಬಗ್ಗೆ ವಾರ್ಡನ್‌ಗಳ ನಿರ್ಲಕ್ಷ್ಯದ ವಿರುದ್ಧ ತರಾಟೆಗೆ ತೆಗೆದುಕೊಂಡರು. ಮುಂದೆ ಶಾಸಕರು ಎಂಎಲ್ಸಿ ಸೇರಿದಂತೆ ಉಪವಿಭಾಗಾಧಿಕಾರಿ, ತಹಶಿಲ್ದಾರ್ ಅಧಿಕಾರಿಗಳು ಹಾಸ್ಟೆಲ್ ಗಳಲ್ಲಿಯೇ ವಾಸ್ತವ್ಯ ಮಾಡತ್ತೇವೆ. ವ್ಯವಸ್ಥೆ ಗಮನಿಸುತ್ತೇವೆ, ಸಮಸ್ಯೆಗಳು ದೂರುಗಳು ಕಂಡುಬAದರೆ ಸ್ಥಳದಲ್ಲಿಯೇ ಕ್ರಮ ಕೈಗೊಳ್ಳಲಾಗುತ್ತದೆ. ಕೂಡಲೇ ನಿರಂತರವಾಗಿ ಅಧಿಕಾರಿಗಳು ಹಾಸ್ಟೆಲ್ ಗಳಿಗೆ ಭೇಟಿ ನೀಡಬೇಕು, ಗುಣಮಟ್ಟ, ಮೂಲಭೂತ ಸೌಕರ್ಯ ನೀಡಬೇಕು ಎಂದು ಸೂಚನೆ ನೀಡಿದರು.
ಇನ್ನು ಮುಂದೆ ಗ್ರಾಮಸ್ಥರೇ ಆಹಾರ ಪದಾರ್ಥ ವಿತರಣೆ ಸಮರ್ಪಕವಾಗಿ ಆಗುತ್ತಿದೆಯೇ ಎಂದು ಪರಿಶೀಲಿಸುತ್ತಾರೆ. ಕೆಲವು ಹಾಸ್ಟೆಲ್ ಗಳಲ್ಲಿ ರಾತ್ರಿ ವೇಳೆ ಮಕ್ಕಳು ಇರುವುದಿಲ್ಲ. ಮಕ್ಕಳು ರಾತ್ರಿ ಊಟವಾದ ನಂತರ ಮನೆಗೆ ಕರೆದುಕೊಂಡು ಹೋಗುತ್ತಾರೆ. ಎಲ್ಲ ಸೌಲಭ್ಯ ಇದ್ದೂ, ಯಾಕೆ ಮನೆಗೆ ಕರೆದುಕೊಂಡು ಹೋಗುತ್ತಾರೆ. ಮನೆಗೆ ಹೋಗುವುದಾರೆ ಹಾಸ್ಟೆಲ್ ಯಾಕೆ ಬೇಕು. ಹಾಸ್ಟೆಲ್‌ನಲ್ಲಿ ಇಲ್ಲದಿದ್ದರೂ ಬಿಲ್ ಮಾತ್ರ ಆಗುತ್ತಿದೆ. ಹಾಸ್ಟಲ್‌ನಲ್ಲಿ ಸಮಸ್ಯೆಗಳು ಮತ್ತು ಕೊರತೆಗಳು ಇದ್ದರೆ ಮಾಹಿತಿ ಕೊಡಿ ಸರಿಪಡಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಹಾಸ್ಟೆಲ್‌ಗಳಿಗೆ ಆಹಾರ ಪೂರೈಕೆ ಮಾಡುವವರು ಯಾರು ಅಂತ ಅವರ ಮುಖ ಸಹ ನೋಡಿಲ್ಲ. ನೀವುಗಳು ಮಾಡೋ ತಪ್ಪುಗಳನ್ನು ನೋಡಿ ಕಣ್ಣು ಮುಚ್ಚಿ ಕುಳಿತುಕೊಳ್ಳುವುದಿಲ್ಲ. ಈ ಸಭೆಯಲ್ಲಿ ಮಾಹಿತಿ ಕೊಟ್ಟು ಮುಂದೆ ನೇರವಾಗಿ ಹಾಸ್ಟೆಲ್‌ಗಳಿಗೆ ಬರತ್ತೇವೆ. ನಾವು ಬಂದಾಗ ದೂರು ಬಂದರೆ ಪರಿಣಾಮ ಸರಿ ಇರಲ್ಲ. ಪ್ರತಿದಿನದ ಮೆನು ಬಗ್ಗೆ ನೋಟಿಸ್ ಬೋರ್ಡಿನಲ್ಲಿ ನಮೂದಿಸಬೇಕು. ಹಾಗೂ ಪ್ರತಿ ಹಾಸ್ಟೆಲ್ ನೋಟೀಸ್ ಬೋರ್ಡ್ ನಲ್ಲಿ ಶಾಸಕರು, ಎಂಎಲ್ಸಿ, ಅಧಿಕಾರಿಗಳ ಮೊಬೈಲ್ ಸಂಖ್ಯೆ ಹಾಕಿ ಸಮಸ್ಯೆಗಳನ್ನು ವಿಧ್ಯಾರ್ಥಿಗಳು ತಿಳಿಸಲು ಸಾಧ್ಯವಾಗುತ್ತದೆ ಎಂದರು.
ಉಪವಿಭಾಗಾಧಿಕಾರಿ ಡಾ.ಮೈತ್ರಿ, ತಹಶಿಲ್ದಾರ್ ನಯನಾ, ತಾಲೂಕು ಪಂಚಾಯತಿ ಇಒ ಮಂಜುನಾಥ್ ಜಿಲ್ಲಾ ಹಿಂದುಳಿದ ಇಲಾಖೆಗಳ ಜಿಲ್ಲಾಧಿಕಾರಿ ಮಂಜುನಾಥ್, ಜಿಲ್ಲಾ ಸಮಾಜಕಲ್ಯಾಣಾಧಿಕಾರಿ ಶ್ರೀನಿವಾಸನ್, ತಾಲೂಕು ಸಹಾಯಕ ನಿರ್ದೇಶಕ ಚನ್ನಬಸಪ್ಪ, ಸೇರಿದಂತೆ ವಾರ್ಡನ್ ಗಳು ಸಭೆಯಲ್ಲಿ ಇದ್ದರು.
ಚಿತ್ರ ೧೭ ಕೆ.ಎಲ್.ಆರ್. ೦೪ : ಶಾಸಕ ಕೊತ್ತೂರು ಮಂಜುನಾಥ್ ರವರ ಅಧ್ಯಕ್ಷತೆಯಲ್ಲಿ ನಡೆದ ಹಾಸ್ಟಲ್ ವಾರ್ಡ್ಗಳ ಸಭೆ. ಎಂ.ಎಲ್.ಸಿ. ಅನಿಲ್ ಕುಮಾರ್, ಉಪವಿಭಾಗಾಧಿಕಾರಿ ಡಾ.ಮೈತ್ರಿ, ತಹಶೀಲ್ದಾರ್ ನಯನಾ ಮುಂತಾದವರಿದ್ದರು.