ಎನ್.ಆರ್.ಪುರ ತಾಲೂಕು ಸೀತೂರು ಗ್ರಾಪಂಯಲ್ಲಿ ನಡೆದ ಗ್ರಾಮ ಸ್ಪಂದನ ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷೆ ರೇಖಾ ಉದ್ಘಾಟಿಸಿದರು. ಕೆ.ಎಸ್.ಉಮೇಶ್, ಎಚ್.ಇ.ದಿವಾಕರ, ಈಶ್ವರ್ ನಾಯ್ಕ, ಎನ್.ಪಿ.ರಮೇಶ್, ಸಿದ್ದಪ್ಪಗೌಡ ಇದ್ದರು. 
ನ್ಯೂಸ್

ಸರ್ಕಾರ ಕಾಡು ಪ್ರಾಣಿಗಳ ಹಾವಳಿ ನಿಯಂತ್ರಿಸಲಿ

ಎನ್.ಆರ್.ಪುರ: ಸೀತೂರು ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲೂ ಕಾಡು ಪ್ರಾಣಿಗಳ ಕಾಟ ವಿಪರೀತವಾಗಿದ್ದು ರೈತರು ಬೆಳೆ ನಷ್ಟವಾಗುತ್ತಿದೆ. ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಗ್ರಾಪಂ ಆವರಣದಲ್ಲಿ ಶನಿವಾರ ನಡೆದ ಗ್ರಾಮ ಸ್ಪಂದನ ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಉಮೇಶ್ ಮಾತನಾಡಿ, ಕಾಡಾನೆಗಳ ಕಾಟ ವಿಪರೀತವಾಗಿದೆ. ಸೀತೂರು ವ್ಯಾಪ್ತಿಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಕಾಡುಕೋಣ, ಮಂಗ, ಹಂದಿ, ನವಿಲು ಕಾಟ ಇದೆ. ರೈತರಿಗೆ ಗನ್ ಲೈಸನ್ಸ್ ಇದ್ದರೂ ಪ್ರಾಣಿಗಳನ್ನು ಹತ್ಯೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಅಡಕೆ ಫಸಲನ್ನು ನಾಶ ಮಾಡುತ್ತಿರುವ ಮಂಗಗಳನ್ನು ಬೆದರಿಸಲು ವೈಜ್ಞಾನಿಕವಾಗಿ ಆವಿಷ್ಕಾರ ಮಾಡಬೇಕು. 94 ಸಿ. ಅಡಿಯಲ್ಲಿ ರೈತರು ಅರ್ಜಿ ನೀಡಿದ್ದರೂ ಎಲ್ಲ ಭೂಮಿಗಳು ಅರಣ್ಯವಾಗಿರುವುದರಿಂದ ಮಂಜೂರು ಮಾಡುತ್ತಿಲ್ಲ. ರಸ್ತೆಗಳು ಹಾಳಾಗಿದೆ ಎಂದು ತಿಳಿಸಿದರು.

ಗ್ರಾಪಂ ಸದಸ್ಯ ಎಚ್.ಇ.ದಿವಾಕರ ಮಾತನಾಡಿ, ಗ್ರಾಮ ಸ್ಪಂದನ ಸಭೆಯಲ್ಲಿ ರೈತರು ಸಮಸ್ಯೆ ಹೇಳಿಕೊಂಡರೆ ಬಗೆಹರಿಸಲು ಅಧಿಕಾರಿಗಳೇ ಇಲ್ಲ. 2-3 ಅಧಿಕಾರಿಗಳು ಹಾಜರಾಗಿದ್ದಾರೆ. ಮುಂದಿನ ಸಭೆಗಳಲ್ಲಿ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳೂ ಸಭೆಗೆ ಆಗಮಿಸಿ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕು ಎಂದರು.

ಹೆಮ್ಮೂರು ಸದಾಶಿವ, ಬಿ.ಟಿ.ರಘು, ಹೆಮ್ಮೂರು ಲೋಕೇಶ್ ಹಾಗೂ ಗ್ರಾಮಸ್ಥರು ಮಾತನಾಡಿ, ಗ್ರಾಮ ಸ್ಪಂದನ ಸಭೆಯಲ್ಲಿ ಸಮಸ್ಯೆಗಳನ್ನು ಹೇಳಿಕೊಂಡಾಗ ಸೂಕ್ತ ಪರಿಹಾರ ಸಿಗಬೇಕು. ಇಲ್ಲದಿದ್ದರೆ ಸಭೆಗಳನ್ನು ಮಾಡಿದರೂ ಪ್ರಯೋಜನವಾಗುವುದಿಲ್ಲ. ಅರಣ್ಯ ಹಕ್ಕುಪತ್ರ ಎಲ್ಲ ರೈತರಿಗೂ ಸಿಗಬೇಕು. ಜಲಜೀವನ್ ಮಿಷನ್ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು. ಗ್ರಾಮೀಣ ಭಾಗದ ರಸ್ತೆ ದುರಸ್ತಿ ಮಾಡಿಸಬೇಕು ಎಂದು ಒತ್ತಾಯಿಸಿದರು.

ಪಿಡಿಒ ಶ್ರೀನಿವಾಸ್ ಮಾತನಾಡಿ, ಪ್ರತಿ ತಿಂಗಳ 2ನೇ ಶನಿವಾರ ಒಂದೊಂದು ಗ್ರಾಪಂಯಲ್ಲಿ ಗ್ರಾಮ ಸ್ಪಂದನ ಕಾರ್ಯಕ್ರಮ ಮಾಡಲು ಸರ್ಕಾರ ಆದೇಶಿಸಿದೆ. ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹರಿಸಲು ಪ್ರಯತ್ನಿಸುತ್ತೇವೆ. ಸಮಸ್ಯೆಗಳನ್ನು ಆಯಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದರು.

ಸೀತೂರು ಗ್ರಾಪಂ ಅಧ್ಯಕ್ಷೆ ರೇಖಾ, ಗ್ರಾಪಂ ನೋಡಲ್ ಅಧಿಕಾರಿ ಈಶ್ವರ್ ನಾಯಕ್, ಗ್ರಾಪಂ ಸದಸ್ಯರಾದ ಸುಜಾತಾ, ಎನ್.ಪಿ.ರಮೇಶ, ಸಿದ್ದಪ್ಪಗೌಡ, ವಿಜಯ, ಗ್ರಾಮ ಆಡಳಿತಾಧಿಕಾರಿ ವಿಶ್ವನಾಥ ಇದ್ದರು.