ವಿಜಯವಾಣಿ ಸುದ್ದಿಜಾಲ ಕೋಲಾರ
ದುಂದು ವೆಚ್ಚದ ಮದುವೆಗಳನ್ನು ಬಿಟ್ಟು ಸರಳ ಮದುವೆಗಳನ್ನು ಬೆಂಬಲಿಸುವ ಅಗತ್ಯವಿದೆ. ನಾವು ಎಷ್ಟು ಖರ್ಚು ಮಾಡಿ ಮದುವೆಯಾಗುತ್ತೇವೆ ಎನ್ನುವುದಕ್ಕಿಂತ ಮದುವೆಯ ನಂತರ ಹೇಗೆ ಬದುಕುತ್ತೇವೆ ಎನ್ನುವುದು ಮುಖ್ಯ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.
ನಗರದ ಬುದ್ದಮಂದಿರಲ್ಲಿ ಭೀಮಸೇನೆ, ಕರ್ನಾಟಕ ಮತ್ತು ಅರಿವು ಭಾರತ ಸಂಯುಕ್ತಾಶ್ರಯದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಏರ್ಪಡಿಸಿದ್ದ ಸರಳವಿವಾಹಿತ ದಂಪತಿಗಳ ಸಮ್ಮಿಲನ ಹಾಗೂ ಅರಿವು ಭಾರತ ಆಶಯಗೀತೆ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಾನು ಸರಳವಾಗಿ ಮದುವೆಯಾಗಿದ್ದು, ಅದಕ್ಕೆ ಕೇವಲ ರೂ.೧೨೦೦ ರೂಪಾಯಿ ಖರ್ಚು ಮಾಡಿದ್ದೆ ಎಂದು ತಿಳಿಸಿದರು.
ಅರಿವು ಭಾರತ ಸಾಮಾಜಿಕ ಬದಲಾವಣೆ ತರುತ್ತಿರುವ ಸಂಸ್ಥೆಯಾಗಿದ್ದು, ಆ ಸಂಘಟನೆಯ ಜೊತೆ ಕೈಜೋಡಿಸಿ ಆಶಯಗೀತೆ ರಚಿಸಿದ್ದೇನೆ. ಅದು ಅರಿವು ಭಾರತದ ಒಟ್ಟು ಕಾರ್ಯಗಳನ್ನು, ಆಶಯಗಳನ್ನು ಜನರಿಗೆ ಮುಟ್ಟಿಸುತ್ತದೆ ಎಂದರು.
ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಬುದ್ದನ ಪ್ರಥಮ ಪ್ರವಚನವನ್ನು ನೆನಪಿಸಿಕೊಳ್ಳಲು ಬುದ್ದಮಂದಿರದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ ಏರ್ಪಡಿಸಿರುವುದು ವಿಶೇಷವಾಗಿದೆ. ಬುದ್ದ ನಮಗೆ ಶಾಂತಿ, ನೆಮ್ಮದಿ ಸೂತ್ರಗಳನ್ನು ಬೋಧಿಸಿದರು ಎಂದು ತಿಳಿಸಿದರು.
ಅಂತರಜಾತಿ ಮದುವೆಗಳನ್ನು ನಾನು ಬೆಂಬಲಿಸುತ್ತೇನೆ. ನಮ್ಮ ಮನೆಗಳಲ್ಲಿ ಅನೇಕ ಅಂತರಜಾತಿ ವಿವಾಹಗಳಾಗಿದ್ದು, ಅವೆರಲ್ಲರೂ ನೆಮ್ಮದಿಯಾಗಿದ್ದಾರೆ. ಆರ್ಥಿಕವಾಗಿ ಬಲಾಢ್ಯರಾದರೆ ಜಾತಿ ದೊಡ್ಡ ವಿಷಯವಾಗುವುದಿಲ್ಲ ಎಂದರು.
ವಿಧಾನಪರಿಷತ್ತಿನ ಸದಸ್ಯರಾದ ಎಂ. ಎಲ್. ಅನಿಲ್ ಕುಮಾರ್ ಮಾತನಾಡಿ, ಸಾಮಾಜಿಕ ಕಾಳಜಿಯುಳ್ಳವರೊಂದಿಗೆ ಸದಾ ಬೆಂಬಲವಾಗಿ ನಿಲ್ಲುವ ಅಗತ್ಯವಿದೆ. ಸಮಾಜ ನಿಂತ ನೀರಾಗಬಾರದು. ಅದು ಹರಿಯುವ ನದಿಯಾಗಬೇಕು ಎಂದು ತಿಳಸಿದರು.
ಜಾನಪದ ಅಕಾಡೆಮಿಯ ಅದ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಬುದ್ದನ ಪ್ರಜ್ಞೆ ಜಗತ್ತನ್ನು ಬೆಳಗಿದೆ. ಆ ಬೆಳಕು ಸಮಾಜದಲ್ಲಿನ ಲೋಪಗಳನ್ನು ತಿದ್ದುವಂತಾಗಲಿ ಎಂದರು.
ಸರಳ ವಿವಾಹಿತದ ೫೨ ದಂಪತಿಗಳ ಸಮ್ಮಿಲನ ಕಾರ್ಯಕ್ರಮ ಇದಾಗಿದ್ದು, ದಂಪತಿಗಳ ಜೊತೆ ಅವರ ಮಕ್ಕಳೂ ಭಾಗವಹಿಸುತ್ತಿರುವುದು ಹರ್ಷ ತಂದಿದೆ. ಮುಂದೆಯೂ ಅದೇ ರೀತಿ ಬೌದ್ಧ ಧರ್ಮ ಅನುಸಾರ ಸರಳ ವಿವಾಹಗಳನ್ನು ಆಯೋಜಿಸುವುದಾಗಿ ಭೀಮಸೇನೆ ರಾಜ್ಯಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ ತಿಳಿಸಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಿಖಿಲ್ ಅವರು ಸರಳ ವಿವಾಹಿತರನ್ನು ಸನ್ಮಾನಿಸಿದರು. ಟಿ ವಿಜಯಕುಮಾರ್, ಶಾಂತಮ್ಮ, ಡಾ ಎಂ ಎ ಚಾರಿಣಿ, ಮಮತಾ ರೆಡ್ಡಿ, ಅರಿವು ಶಿವಪ್ಪ, ಜನವಾದಿ ಮಹಿಳಾ ಸಂಘಟನೆಯ ವಿ ಗೀತಾ, ಸುಗತಪಾಲ ಬಂತೇಜಿ , ಡಿ. ಆರ್ ರಾಜಪ್ಪ, ವಾರಿಧಿ ಮಂಜುನಾಥ್ ರೆಡ್ಡಿ, ಈ ನೆಲ ಈ ಜಾಲ ವೆಂಕಟಾಚಲಪತಿ, ರಾಧಮಣಿ, ಪೂರ್ಣೇಶ್ ರಾಜು, ಮಂಜು ಕನ್ನಿಕಾ, ತಿಪ್ಪಸಂದ್ ಶ್ರೀನಿವಾಸ್, ಮಂಜುಳಾ ಕೊಂಡರಾಜನಹಳ್ಳಿ, ಹೂವಲ್ಲಿ ನಾಗರಾಜ್, ಮುಂತಾದವರು ಉಪಸ್ಥಿತರಿದ್ದರು.
ಚಿತ್ರ ೧೧ ಕೆ.ಎಲ್.ಆರ್. ೦೨ : ಸರಳವಿವಾಹಿತ ದಂಪತಿಗಳ ಸಮ್ಮಿಲನ ಹಾಗೂ ಅರಿವು ಭಾರತ ಆಶಯಗೀತೆ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಆರ್.ರವಿ, ಶಾಸಕ ಕೊತ್ತೂರು ಮಂಜುನಾಥ್, ಎಂ.ಎಲ್.ಸಿ.ಅನಿಲ್‌ಕುಮಾರ್ ಮುಂತಾದವರು ಇದದ್ರು.