ನಗರದ ಪ್ರಮುಖ ಯೋಗ ಲೈಫ್ ಸ್ಟೈಲ್ ಮಳಿಗೆಯಾಗಿರುವ ಸಯೋಗ ಸಂಸ್ಥೆಯು ಪ್ರಸ್ತುತ ಪಡಿಸುತ್ತಿರುವ ‘ಸಯೋಗ ಬಜಾರ್’ ಅನ್ನು ರಾಜ ವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರು ಶನಿವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸಯೋಗ ಬಜಾರ್ ಅನ್ನುವುದು ಕೇವಲ ಒಂದು ಉತ್ಸವ ಮಾತ್ರವೇ ಅಲ್ಲ, ಇದು ಕರಕುಶಲತೆ ಮತ್ತು ಕುಶಲಕರ್ಮಿಗಳಿಗೆ ನೆರವು ಒದಗಿಸುವ ಕಾರ್ಯಕವಾಗಿದೆ. ತನ್ಮೂಲಕ ವಿವಿಧ ಪ್ರದೇಶಗಳ ಕುಶಲಕರ್ಮಿಗಳನ್ನು ಉದ್ಯಮಿಗಳೆಂದು ಗುರುತಿಸಿ ಗೌರವಿಸಲಾಗುತ್ತಿದೆ. ಜತೆಗೆ ಮೈಸೂರಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರದರ್ಶಿಸಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಯೋಗ ಸಂಸ್ಥೆ ಮಾಲೀಕರಾದ ಶ್ರುತಿ ರಂಗ ಅವರು ಮಾತನಾಡಿ, ಸಯೋಗ ಬಜಾರ್ ಆಯೋಜಿಸುವ ಉದ್ದೇಶವೆಂದರೆ ಗ್ರಾಹಕರಿಗೆ ನಮ್ಮ ಪರಂಪರೆಯ ಉತ್ಕೃಷ್ಠ ಉತ್ಪನ್ನಗಳು ಒಂದೇ ಕಡೆ ದೊರೆಯುವಂತೆ ಮಾಡುವುದಲ್ಲದೇ ಕುಶಲಕರ್ಮಿಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿ ಅವರನ್ನು ಸಬಲೀಕರಣಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಎನ್‌ಆರ್ ಗ್ರೂಪ್ ನಿರ್ದೇಶಕ ಮತ್ತು ರಂಗ ಸನ್ಸ್ ಚೇರ್‌ಮನ್ ಪವನ್ ರಂಗ, ಚೇರ್‌ಮನ್ ಆರ್. ಗುರು ಮತ್ತಿತರರು ಹಾಜರಿದ್ದರು.
ಎರಡು ದಿನ ಪ್ರದರ್ಶನ:
ಡಿ.15ರ ಭಾನುವಾರದ ತನಕ ನಡೆಯುವ ಸುಯೋಗ ಬಜಾರ್‌ನಲ್ಲಿ ನೈಸರ್ಗಿಕ ಸುಗಂಧ ದ್ರವ್ಯಗಳು, ಫ್ಯಾಬ್ರಿಕ್ ಗೊಂಬೆಗಳು, ಸ್ಟೇಷನರಿ ಪದಾರ್ಥ, ಗೃಹಾಲಂಕಾರ ವಸ್ತುಗಳು, ಮ್ಯಾಕ್ರೇಮ್ ಉತ್ಪನ್ನಗಳು, ಉಡುಪುಗಳು, ಆಭರಣಗಳು, ಕಾಫಿ ಉತ್ಪನ್ನಗಳು, ಗಾರ್ಮೇಂಟ್, ಬೇಕರಿ ಉತ್ಪನ್ನಗಳು, ಬೆಡ್‌ಲಿನೆನ್‌ಗಳು, ಸ್ಕ್ವಾಷ್ ಗಳು, ಉಪ್ಪಿನಕಾಯಿಗಳು, ರೆಸಿನ್ ಉತ್ಪನ್ನಗಳು, ಪೀಠೋಪಕರಣಗಳ ಪ್ರದರ್ಶನ ಮತ್ತು ಮಾರಾಟವಿದೆ.
ವಿಶೇಷವಾಗಿ ಈ ಉತ್ಸವದಲ್ಲಿ ರಂಗರಾವ್ ಸ್ಮಾರಕ ವಿಕಲಚೇತನರ ಶಾಲೆಯ ಮಕ್ಕಳು ತಯಾರು ಮಾಡಿರುವ ಬುಟ್ಟಿಗಳು, ಪೇಪರ್‌ಬ್ಯಾಗ್ ಮತ್ತಿತರ ವಿಶಿಷ್ಟ ವಸ್ತುಗಳ ಮಾರಾಟ ಕೂಡ ಲಭ್ಯವಿದೆ.